ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯ ಸಂಗ್ರಹ ದಾಖಲೆ ಸೃಷ್ಟಿಸಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ 1,13,865 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಈ ತೆರಿಗೆ ವ್ಯವಸ್ಥೆ ಆರಂಭವಾದಂದಿನಿಂದ ಸಂಗ್ರಹವಾದ ಅತೀ ಹೆಚ್ಚು ಆದಾಯವಾಗಿದೆ.
ಕಳೆದ ಆಗಸ್ಟ್ ತಿಂಗಳಿನಿಂದ ಜೆಎಸ್‌ಟಿಯಿಂದ ಬರುವ ತೆರಿಗೆ ಸಂಗ್ರಹದಲ್ಲಿ ನಿರಂತರ ಹೆಚ್ಚಳವಾಗುತ್ತಿದ್ದು, ಕಳೆದ ತಿಂಗಳು ಅತೀ ಹೆಚ್ಚು ಅಂದರೆ ಈ ಹಿಂದಿನ 97,247 ಕೋಟಿಯಿಂದ 1.06 ಲಕ್ಷ ಕೋಟಿ ರೂಗೆ ತಲುಪಿತ್ತು. ಇದು ಅಲ್ಲಿಯವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಹೆಚ್ಚಿನ ಅನುಸರಣೆ ಮತ್ತು ಹೆಚ್ಚಿನ ರಿಟರ್ನ್ಸ್ ಫೈಲ್ ಮಾಡಿದ ಹಿನ್ನೆಲೆಯಲ್ಲಿ ಈ ದಾಖಲೆ ಸಾಧ್ಯವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ, ಏಪ್ರಿಲ್‌ನಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯ 1,13,865 ಕೋಟಿ ರೂ. ಇದರಲ್ಲಿ CGST ಪಾಲು 21,163 ಕೋಟಿ ರೂ ಆದ್ರೆ, SGST ಪಾಲು 28,801 ಕೋಟಿ ರೂಪಾಯಿ ಮತ್ತು IGST ಪಾಲು 54,733 ಕೋಟಿ ರೂಪಾಯಿ ಆಗಿದೆ.