ಪಾಟ್ನಾ(ಬಿಹಾರ): ಬಕ್ಸಾರ್‌ನಲ್ಲಿ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆಗಾಗಿ ಕೇಂದ್ರ ಜಲ ವಿದ್ಯುತ್ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟ್ವೀಟ್ ಮಾಡಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡುವ ಮೂಲಕ ಪ್ರಕರಣದ ಗಂಭೀರತೆಯನ್ನ ಅರಿವಿಗೆ ತೆಗೆದುಕೊಳ್ಳುವಂತೆ ಹೇಳಿದ್ದಾರೆ.
“ಬಿಹಾರದ ಬಕ್ಸಾರ್ ಪ್ರದೇಶದಲ್ಲಿ ಹರಿಯುವ ಗಂಗಾನದಿಯಲ್ಲಿ ಶವಗಳು ತೇಲುತ್ತಿರುವ ಘಟನೆ ದುರದೃಷ್ಟಕರವಾಗಿದೆ. ಇದು ಖಂಡಿತವಾಗಿಯೂ ತನಿಖೆ ಮಾಡುವಂತಹ ವಿಷಯವಾಗಿದೆ. ಗಂಗಾ ಮಾತೆಯ ಸ್ವಚ್ಛತೆಗಾಗಿ ಮೋದಿ ಸರ್ಕಾರ ಪಣ ತೊಟ್ಟಿರುವಾಗ ಅಲ್ಲಿ ನಡೆದ ಇಂತಹ ಘಟನೆ ಖೇದಕರ. ಸಂಬಂಧಪಟ್ಟ ರಾಜ್ಯಗಳು ಈ ನಿಟ್ಟಿನಲ್ಲಿ ತಕ್ಷಣದ ಕ್ರಮವನ್ನು ತೆಗೆದುಕೊಳ್ಳಬೇಕು”, ಎಂದು ಶೇಖಾವತ್ ಟ್ವೀಟ್ ಮಾಡಿದ್ದಾರೆ
ಇನ್ನು ಈ ಕುರಿತು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಕೂಡ ಟ್ವೀಟ್ ಮಾಡಿದ್ದು, “ಗಂಗಾ ಮತ್ತು ಯಮುನಾದಲ್ಲಿ ತೇಲುತ್ತಿರುವ ಮೃತ ದೇಹಗಳ ದೃಶ್ಯಗಳು ಭಯಾನಕವಾಗಿವೆ. ಮೃತ ದೇಹಗಳನ್ನು ಅವರ ಪ್ರೀತಿಪಾತ್ರರಿಗೆ ಕೊನೆಯ ವಿಧಿಗಳಿಗಾಗಿ ನೀಡಲು ಸಾಧ್ಯವಾಗದಿರುವುದು ನೋವಿನ ಸಂಗತಿ. ಇದು ನಮ್ಮ ಶ್ರೇಷ್ಠ ರಾಷ್ಟ್ರವೇ? ಈ ಸರ್ಕಾರಕ್ಕೆ ಜೀವಂತವಾಗಿರುವವರಿಗೂ, ಸತ್ತವರಿಗೂ ಯಾವುದೇ ಗೌರವ ಇಲ್ಲ. ನಮ್ಮ ಮನವಿ ಕಿವುಡ ಕಿವಿಗೆ ಬೀಳುವುದಿಲ್ಲ”, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದ ಚೌಸಾ ಬ್ಲಾಕ್‌ನ ಮಹಾದೇವ ಘಾಟ್‌ನಲ್ಲಿ 50 ಕ್ಕೂ ಹೆಚ್ಚು ಶವಗಳು ನದಿ ದಡದಲ್ಲಿ ಹರಡಿಕೊಂಡಿರುವ ಬಗ್ಗೆ ಈಟಿವಿ ಭಾರತ ಸುದ್ದಿ ಬಿತ್ತರಿಸಿತ್ತು. ನಂತರದಲ್ಲಿ ಚೌಸಾದ ಬಿಡಿಒ ಇದನ್ನು ದೃಢಪಡಿಸಿದ್ದು, ಈ ಮೃತ ದೇಹಗಳು ಉತ್ತರ ಪ್ರದೇಶದಿಂದ ಇಲ್ಲಿಗೆ ಬಂದಿವೆ ಎಂದು ಹೇಳಿದ್ದಾರೆ. ಆ ಬಳಿಕ ಬಕ್ಸಾರ್ ಆಡಳಿತವು ಘಟನೆ ಬಗ್ಗೆ ಪ್ರಮುಖ ಕ್ರಮ ಕೈಗೊಂಡಿತ್ತು.