ಹರಿಹರ: ಸಾರ್ವಜನಿಕ ಸ್ಥಳಗಳಲ್ಲಿ ಇರುವ ಖಾಸಗಿ ಬಹು ಮಹಡಿ ಕಟ್ಟಡಗಳ ವಿದ್ಯುತ್ ಪರಿವರ್ತಕ (ಟಿಸಿ)ಗಳನ್ನು ತೆರವುಗೊಳಿಸಲು ಆಗ್ರಹಿಸಿ ಡಿಎಸ್‌ಎಸ್ (ಪ್ರೊ. ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಘಟನೆ ಸಂಚಾಲಕ ಮಹಾಂತೇಶ್ ಮಾತನಾಡಿ, ನಗರದ ಪ್ರಭಾವಿಗಳ ವಿವಿಧ ಬಹು ಮಹಡಿ ಕಟ್ಟಡಗಳಿಗೆ ಸಂಬಂಧಿಸಿದ ಟಿಸಿಗಳು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಸ್ಥಾಪಿಸಲಾಗಿದೆ. ಇದರಿಂದ ಜನರ ಜೀವಕ್ಕೆ ಅಪಾಯ ಉಂಟಾಗಲಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದರು.
ದೊಡ್ಡಿ ಬೀದಿಯ ತರಕಾರಿ ಮಾರುಕಟ್ಟೆ ಬಳಿಯ ಸಿದ್ದೇಶ್ವರ ಬಹುಮಹಡಿ ಕಟ್ಟಡದ ವಿದ್ಯುತ್ ಪರಿವರ್ತಕದ ಕಂಬ ಹೊಸಪೇಟೆ ರಸ್ತೆಯ ಅಂಚಿನಲ್ಲಿದೆ. ಕಂಬಕ್ಕೆ ಅಳವಡಿಸಿರುವ ಪರಿವರ್ತಕ, ಫ್ಯೂಸ್, ವೈಯರ್ ಇತ್ಯಾದಿ ಭಾಗಗಳು ರಸ್ತೆಗೆ ಹೊರ ಚಾಚಿಕೊಂಡಿದ್ದು, ದಾರಿಹೋಕರ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ತಿಳಿಸಿದರು.
ಹಳೇ ಪಿಬಿ ರಸ್ತೆಯ ಜಯಶ್ರೀ ಟಾಕೀಸ್ ಎದುರಿನಲ್ಲಿ ವಿದ್ಯುತ್ ಪರಿವರ್ತಕ ಸಾರ್ವಜನಿಕ ರಸ್ತೆಯಲ್ಲಿದ್ದು, ವಾಗೀಶ್ ನಗರದ ಅಂಚೆ ಕಚೇರಿ ಹಿಂಬದಿಯ ಬಸವರಾಜ ಖಾನಾವಳಿ ಸಮೀಪದ ಡಿ.ಬಿ. ಮಹದೇವ ತಂದೆ ಡಿ. ಬಸವರಾಜ ಎಂಬುವರ ಕಟ್ಟಡದ ವಿದ್ಯುತ್ ಪರಿವರ್ತಕ ಸಹ ಸಾರ್ವಜನಿಕ ರಸ್ತೆಯಲ್ಲಿದೆ. ಆದ್ದರಿಂದ ಬೆಸ್ಕಾಂ ಅಧಿಕಾರಿ ವಿಜಯಲಕ್ಷ್ಮಿಯವರು ನಗರದ ಎಲ್ಲಾ ಬಹು ಮಹಡಿ ಕಟ್ಟಡಗಳ ಟಿಸಿ, ಜನರೇಟರ್ ಅಳವಡಿಸಿರುವ ಸ್ಥಳ ಪರಿಶೀಲನೆ ಮಾಡಿ ಅಕ್ರಮ ಟಿಸಿಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಬಗೆಹರಿಸುವಂತೆ ಡಿಎಸ್‌ಎಸ್ ಕಾರ್ಯಕರ್ತರು ಮನವಿ ಪತ್ರವನ್ನು ಬೆಸ್ಕಾಂ ಇಇ ಕಚೇರಿ ಅಧಿಕಾರಿ ನಜ್ಮಾ ಅವರಗೆ ಸಲ್ಲಿಸಿದರು.