ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸಿರುವ ಜೋಡಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ.
ಈಗಾಗಲೇ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಹಾಗೂ ಪೊಲೀಸ್ ಪೇದೆಗಳಾದ ಪವನ್ ಅಮೀನ್ ಹಾಗೂ ವೀರೇಂದ್ರ ಆಚಾರ್ಯ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಮತ್ತೆ ಐವರನ್ನು ಬಂಧಿಸುವ ಮೂಲಕ ಆರೋಪಿಗಳ ಸಂಖ್ಯೆ 13ಕ್ಕೇರಿದೆ.
ಕೊಲೆ ಕೃತ್ಯದಲ್ಲಿ ನೇರ ಭಾಗಿಯಾದ್ದಾನೆ ಎನ್ನಲಾದ ಅಭಿಷೇಕ್ ಪಾಲನ್ ಮತ್ತು ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಲ್ಲಿ ಸಂತೋಷ್ ಕುಂದರ್, ನಾಗರಾಜ್, ಪ್ರಣವ್ ರಾವ್, ಶಂಕರ ಮೊಗವೀರ ಎಂಬುವರನ್ನು ಬಂಧಿಸಲಾಗಿದೆ. ಈ ಪೈಕಿ ಬಡ್ಡಿ ವ್ಯವಹಾರ ಹಾಗೂ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್ ಕೊಲೆಯಲ್ಲಿ ನೇರ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಸಂತೋಷ್ ಚಾಲಕ ವೃತ್ತಿ ಮಾಡುತ್ತಿದ್ದು, ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ್ದಾನೆ. ನಾಗರಾಜ ಯಾನೆ ರೊಟ್ಟಿ ಫ್ಯಾಕ್ಟರಿ ನಡೆಸುತ್ತಿದ್ದು, ಆರೋಪಿಗಳಿಗೆ ಆಶ್ರಯ ನೀಡಿದ್ದಾನೆ. ಅಂತಿಮ ಬಿಕಾಂ ವಿದ್ಯಾರ್ಥಿ ಪ್ರಣವ್ ರಾವ್ ಆರೋಪಿಗಳಿಗೆ ಮೊಬೈಲ್ ಹಾಗೂ ಹಣ ರವಾನಿಸಿದ್ದಾನೆ. ಆಟೋ ಚಾಲಕ ಶಂಕರ್ ಆರೋಪಿಗಳಿಗೆ ಆಶ್ರಯ ನೀಡಿದ್ದಾನೆಂದು ಎಸ್. ಲಕ್ಷ್ಮಣ ನಿಂಬರ್ಗಿ ತಿಳಿಸಿದ್ದಾರೆ.