ಬೆಂಗಳೂರು: ನಿನ್ನೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಉಂಟಾದ ಆಮ್ಲಜನಕ ಅಭಾವದ ಕಾರಣಕ್ಕೆ ಅಲ್ಲಿನ ಎಲ್ಲ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ಮಾಡಲು ಇಂದು ಸಂಸದ ಡಿ.ಕೆ. ಸುರೇಶ್ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಸೋಂಕಿತರ ಸಮಸ್ಯೆ, ಬೆಡ್ ವೆಂಟಿಲೇಟರ್ ವ್ಯವಸ್ಥೆ ಹಾಗೂ ಆಕ್ಸಿಜನ್ ಪೂರೈಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆಸ್ಪತ್ರೆ ಮೂಲಗಳಿಂದ ತಗೆದುಕೊಂಡರು. ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಸಂಗ್ರಹವಿದ್ದ ಆಮ್ಲಜನಕ ಖಾಲಿಯಾಗಲಿದೆ ಎಂಬ ಮಾಹಿತಿಯನ್ನು ವೈದ್ಯರು ತಿಳಿಸಿದ್ದರು. ಕನಿಷ್ಠ ಒಂದು ಗಂಟೆಯ ಹಿಂದಿನವರೆಗೂ ಪೂರೈಕೆ ಆಗಿರಲಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ ಎಂದು ಬೇಸರಗೊಂಡ ಸುರೇಶ್ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಸಂಬಂಧಿಸಿದವರಿಗೆ ಕರೆ ಮಾಡಿ ಆಮ್ಲಜನಕ ಪೂರೈಸುವಂತೆ ಸೂಚನೆ ನೀಡಿದ್ದರು. ಚಾಮರಾಜನಗರದಲ್ಲಿ ನಡೆದಂತ ದುರ್ಘಟನೆ ಮತ್ತೆ ನಡೆಯದಂತೆ ತಡೆಯಲು ಸುರೇಶ್ ಮುಂಚಿತವಾಗಿಯೇ ಸರ್ಕಾರದ ಗಮನಕ್ಕೆ ವಿಚಾರ ತಂದಿದ್ದರು. ಈ ಪ್ರಯತ್ನ ಫಲಕೊಟ್ಟು ಸಂಜೆಯ ವೇಳೆಗೆ ಆಮ್ಲಜನಕ ಪೂರೈಕೆಯಾಗಿತ್ತು. ಇಷ್ಟಾಗಿಯೂ ಇಲ್ಲಿನ ಸಮಸ್ಯೆ ಅರಿಯಲು ಸುರೇಶ್ ಇಂದು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು.