ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಹಾಗೂ ಕಾಫಿ ಡೇ ಮಾಲೀಕರಾಗಿದ್ದ ವಿ. ಜಿ. ಸಿದ್ಧಾರ್ಥ ಪುತ್ರನ ನಡುವೆ ವಿವಾಹ ನಿಶ್ಚಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.
ಉಭಯ ಕುಟುಂಬಗಳ ನಡುವೆ ಆತ್ಮೀಯತೆ ಉತ್ತಮವಾಗಿದ್ದು, ಇದನ್ನ ಸಂಬಂಧವಾಗಿ ಪರಿವರ್ತಿಸುವ ಪ್ರಯತ್ನ ಕಳೆದ ಕೆಲದಿನಗಳಿಂದ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿದ್ದು, ವಿವಾಹ ಇನ್ನೂ ನಿಶ್ಚಯವಾಗಿಲ್ಲ ಎಂಬ ಸ್ಪಷ್ಟ ಮಾಹಿತಿ ಲಭಿಸಿದೆ.
ಎಸ್ಎಂ ಕೃಷ್ಣ ಅವರ ಗರಡಿಯಲ್ಲಿ ಪಳಗಿರುವ ರಾಜಕಾರಣಿ ಡಿ. ಕೆ. ಶಿವಕುಮಾರ್. ಎಸ್ಎಂಕೆ ಬಿಜೆಪಿ ಸೇರಿದರೂ ಡಿಕೆಶಿ ಈಗಲೂ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ವ್ಯವಹಾರದಲ್ಲಿ ವಿಪರೀತ ನಷ್ಟವಾದ ಹಿನ್ನೆಲೆ ಕಳೆದ ವರ್ಷ ಜುಲೈ ತಿಂಗಳಲ್ಲಿ ವಿ.ಜಿ. ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆಗೆ ಶರಣಾಗಿದ್ದರು.
ಅವರೊಂದಿಗೂ ಡಿಕೆಶಿ ನಿಕಟ ಸಂಪರ್ಕ ಹೊಂದಿದ್ದು 25 ವರ್ಷಕ್ಕೂ ಹೆಚ್ಚಿನ ಒಡನಾಟ ಇತ್ತು. ಇದೀಗ ಎರಡೂ ಕುಟುಂಬಗಳು ಸಂಬಂಧಿಗಳಾಗಲು ಮುಂದಾಗಿದ್ದಾರೆ ಎಂಬ ಮಾಹಿತಿ ಹರಡಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಡಿಕೆ ಶಿವಕುಮಾರ್ ಕುಟುಂಬ ಮೂಲಗಳು, ವಿವಾಹ ನಿಶ್ಚಯವಂತೂ ಆಗಿಲ್ಲ. ಮಾತುಕತೆ ನಡೆದಿರುವ ಬಗ್ಗೆಯೂ ಮಾಹಿತಿ ಇಲ್ಲ ಎಂದು ತಿಳಿಸಿದೆ.
ಮದುವೆ ಕೇವಲ ಅಂತೆ- ಕಂತೆ
ಎಸ್.ಎಂ. ಕೃಷ್ಣ ಅವರ ಮೊಮ್ಮಗ ಅಮಾರ್ತ್ಯ ಹೆಗ್ಡೆ ಹಾಗೂ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಅವರ ವಿವಾಹ ನಡೆಯಲಿದೆ ಎನ್ನುವುದು ಸದ್ಯದ ಮಟ್ಟಿಗೆ ಅಂತೆ -ಕಂತೆಯಾಗಿದ್ದು, ಈ ಹಿಂದೆ ಕೂಡ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಐಶ್ವರ್ಯ ವಿವಾಹ ನಡೆಯಲಿದೆ ಎಂಬ ವದಂತಿ ಹಬ್ಬಿತ್ತು.
ಆ ಸಂದರ್ಭದಲ್ಲಿ ಕೂಡ ಎರಡೂ ಕುಟುಂಬಗಳು ಈ ವಿಚಾರವನ್ನು ಅಲ್ಲಗಳೆದಿದ್ದವು. ಇದೀಗ ಗುರು - ಶಿಷ್ಯರ ಕುಟುಂಬದ ನಡುವೆ ಸಂಬಂಧ ಬೆಸೆಯಲಿದೆ ಎಂಬ ಹೊಸ ವದಂತಿ ಹಬ್ಬಿದೆ. ಈ ಬಗ್ಗೆ ಎರಡು ಕುಟುಂಬಗಳು ಇದುವರೆಗೂ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.
ವಿವಾಹ ನಡೆಯಲಿದೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ವಿವಾಹ ನಿಶ್ಚಯವಂತೂ ಆಗಿಲ್ಲ ಎಂಬ ಮಾತು ಸ್ಪಷ್ಟಪಡಿಸಲಾಗಿದೆ. ಇದಿನ್ನು ಮಾತುಕತೆಯ ಹಂತದಲ್ಲಿ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇಬ್ಬರೂ ಬ್ಯುಸಿ
ಅಮೆರಿಕದಲ್ಲಿ ವ್ಯಾಸಂಗ ಮಾಡಿ ಹಿಂದಿರುಗಿಸುವ ಅಮಾರ್ತ್ಯ ಹೆಗ್ಡೆ ಸದ್ಯ ತಾಯಿ ಮಾಳವಿಕಾ ಅವರೊಂದಿಗೆ ಕಂಪನಿಯ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಡಿಕೆ ಶಿವಕುಮಾರ್ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಐಶ್ವರ್ಯ ಮುನ್ನಡೆಸುತ್ತಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಇಬ್ಬರೂ ಮಹತ್ವದ ಜವಾಬ್ದಾರಿ ನಿಭಾಯಿಸುತ್ತಿದ್ದು, ಇವರ ವಿವಾಹದ ವಿಚಾರ ಈಗ ದೊಡ್ಡ ಸುದ್ದಿಯಾಗಿದೆ.
ಮುಂಬರುವ ಜುಲೈ ತಿಂಗಳಲ್ಲಿ ಸಿದ್ದಾರ್ಥ್ ಹೆಗ್ಡೆ ನಿಧನರಾಗಿ ವರ್ಷ ಪೂರ್ಣಗೊಳ್ಳಲಿದ್ದು, ಇದಾದ ಬಳಿಕವೇ ಅಮಾರ್ತ್ಯ ಹೆಗ್ಡೆ ವಿವಾಹದ ಮಾತುಕತೆ ನಡೆಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಅಲ್ಲಿಯವರೆಗೂ ಯಾವುದೇ ಶುಭ ಸಮಾರಂಭವನ್ನು ಕುಟುಂಬ ನಡೆಸುವಂತಿಲ್ಲ.
ಈ ಹಿನ್ನೆಲೆ ಅಲ್ಲಿಯವರೆಗೂ ಈ ವಿವಾಹದ ವಿಚಾರ ಅಂತೆಕಂತೆ ಯಾಗಿಯೇ ಉಳಿಯಲಿದ್ದು, ತದನಂತರವೇ ಇದಕ್ಕೆ ಅಸಲಿ ಉತ್ತರ ಸಿಗಲಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಿದ್ಧಾರ್ಥ್ ಸಾವಿಗೆ ಮುನ್ನವೇ ವಿವಾಹ ಮಾತುಕತೆ ನಡೆದಿತ್ತು, ಆದರೆ, ಸಾವಿನ ಹಿನ್ನೆಲೆ ಸಮಾರಂಭವನ್ನು ಮುಂದೂಡಲಾಗಿತ್ತು.
ಕಳೆದ ಭಾನುವಾರ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಎರಡು ಕುಟುಂಬಗಳು ಒಟ್ಟಾಗಿ ಮಾತುಕತೆ ನಡೆಸಿ ಜುಲೈ ನಂತರ ವಿವಾಹದ ದಿನಾಂಕ ನಿಗದಿ ಪಡಿಸಲು ನಿರ್ಧರಿಸಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದರೆ, ಈ ವಿಚಾರವನ್ನು ಎರಡು ಕುಟುಂಬಗಳು ದೃಢಪಡಿಸಿಲ್ಲ.