ಧಾರವಾಡ : ಕೊರೊನಾದಿಂದ ಸಾವನ್ನಪ್ಪಿದವರ ಶವ ಸಂಸ್ಕಾರವನ್ನು ಪಾಲಿಕೆ ವತಿಯಿಂದ ಉಚಿತವಾಗಿ ನೆರವೇರಿಸಲು ಈಗಾಗಲೇ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಹೆಗ್ಗೇರಿ, ವಿದ್ಯಾನಗರ ಹಾಗೂ ಧಾರವಾಡದ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಶವ ಸಂಸ್ಕಾರ ಮಾಡಲಾಗುವುದು.
ಕೊರೊನಾ ಸೋಂಕು ಜಿಲ್ಲೆಯಲ್ಲಿ ಹೆಚ್ಚಾಗುತ್ತಾ ಹೋದರೆ, ಆಕ್ಸಿಜನ್ ಬೆಡ್‌ಗಳಲ್ಲಿ ಹೆಚ್ಚಳವಾದರೆ ಧಾರವಾಡ ಜಿಲ್ಲೆಯಲ್ಲೂ ಆಕ್ಸಿಜನ್ ಕೊರತೆ ಉಂಟಾಗಬಹುದು ಎಂದು ಅಂದಾಜಿಸಿದರು.
ಸದ್ಯಕ್ಕೆ ಆಕ್ಸಿಜನ್ ಕೊರತೆಯಿಲ್ಲ. ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಬರಬೇಕಾದ 1200 ಮೆಟ್ರಿಕ್ ಟನ್ ಆಕ್ಸಿಜನ್ ಪ್ರಮಾಣವನ್ನು ಇನ್ನೂ ಹೆಚ್ಚಳ ಮಾಡುವಂತೆ ನಾವು ನಿರಂತರವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಸಾಧಿಸುತ್ತಿದ್ದೇವೆ. ಜಿಂದಾಲ್‌ನವರೂ ಕೂಡ ಅಧಿಕ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುತ್ತಿದ್ದಾರೆ ಎಂದರು.
ಆರ್‌ಟಿಪಿಸಿಆರ್ ಮಾಡಿಸಿದವರಿಗೆ ಮೂರ್ನಾಲ್ಕು ದಿನದ ನಂತರ ವರದಿ ಬರುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಆ ವರದಿಯನ್ನು 24 ಗಂಟೆಯೊಳಗೆ ನೀಡುವಂತೆ ಕ್ರಮಕೈಗೊಳ್ಳಬೇಕು. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅವಳಿನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಆಂದೋಲನದ ಮಾದರಿ ಮನೆ ಮನೆಗೆ ಸರ್ವೆ ಮಾಡಿ ಯಾರಿಗೆ ರೋಗ ಲಕ್ಷಣಗಳಿವೆಯೋ ಅಥವಾ ನೆಗಡಿ, ಜ್ವರ ಇದೆಯೋ ಅಂತವರಿಗೂ ಔಷಧ ಕಿಟ್‌ಗಳನ್ನು ಪೂರೈಕೆ ಮಾಡಿ ಕೊರೊನಾ ನಿಯಂತ್ರಣ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಗೆ 2 ಸಾವಿರ ರೆಮಿಡಿಸೀವರ್ ಬರಲಿದೆ. ಯಾರು ಫಸ್ಟ್ ಡೋಸ್ ಪಡೆದುಕೊಂಡಿದ್ದಾರೆ, ಅವರಿಗೆ ಎರಡನೇ ಡೋಸ್ ನೀಡಲಾಗುವುದು ಎಂದರು.
ಕೊರೊನಾ ಟೆಸ್ಟಿಂಗ್ ಸೆಂಟರ್ ತೆರೆಯಲು ನಿರ್ಧಾರ : ಕಿಮ್ಸ್‌ನಲ್ಲಿ ಇನ್ನೊಂದು ಕೊರೊನಾ ಟೆಸ್ಟಿಂಗ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಯಾವ ತಾಲೂಕಾ ಆಸ್ಪತ್ರೆಗಳಲ್ಲಿ ಬಳಕೆ ಆಗದೇ ಉಳಿದಿರುವ ವೆಂಟಿಲೇಟರ್ ಬೆಡ್‌ಗಳನ್ನು ಕಿಮ್ಸ್‌ಗೆ ಬಳಸಿಕೊಳ್ಳಲು ಸೂಚಿಸಲಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಆಕ್ಸಿಜನ್ ಕೊರತೆ ಕಾಡುತ್ತಿದೆ.
ನಮ್ಮ ಜಿಲ್ಲೆಯಲ್ಲಿ ಬೇರೆ ಜಿಲ್ಲೆಯ ಸುಮಾರು 400 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವುದರಿಂದ ಬೆಡ್‌ಗಳ ಕೊರತೆ ಎದುರಾಗಿದೆ. ಸುತ್ತಮುತ್ತಲ ಜಿಲ್ಲೆಯ ಜಿಲ್ಲಾಡಳಿತಕ್ಕೆ ಅದೇ ಜಿಲ್ಲೆಯಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅತೀ ಹೆಚ್ಚು ಸೋಂಕಿತರು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಖಾಸಗಿ ಆಸ್ಪತ್ರೆಯವರು ಸಿಟಿ ಸ್ಕ್ಯಾನ್ ಗೆ ಹೆಚ್ಚಿನ ಹಣ ವಸೂಲಿ ಮಾಡದೇ ಮಾನವೀಯತೆ ದೃಷ್ಟಿಯಿಂದ ನೋಡಬೇಕು ಎಂದ ಶೆಟ್ಟರ್, ನಾಳೆ ಜಿಲ್ಲೆಗೆ ಅಲ್ಪ ಪ್ರಮಾಣದಲ್ಲಿ ಕೊರೊನಾ ವ್ಯಾಕ್ಸಿನ್ ಬರಲಿದ್ದು, ಮೊದಲ ಡೋಸ್ ಪಡೆದವರಿಗೆ ಎರಡನೇಯದಾಗಿ ಆ ಡೋಸ್ ನೀಡಲಾಗುವುದು ಎಂದರು.