ಬಂಟ್ವಾಳ : ನಗರದ ಮಿನಿ ವಿಧಾನಸೌಧದ ಮುಂದೆ ಋಣಮುಕ್ತ ಹೋರಾಟ ಸಮಿತಿಯಿಂದ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಬಿ ಎಂ ಭಟ್, ಬಡ ಮಹಿಳೆಯರ ಮೈಕ್ರೋ ಸಾಲಗಳ ಮನ್ನಾ ಹಾಗೂ ಕೊರೊನಾ ಸಂತ್ರಸ್ತ ಬಡವರಿಗೆ ನಗದು ಪರಿಹಾರ, ರೇಷನ್ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ಸಮಸ್ಯೆ ತಡೆಯಲು ಕೇಂದ್ರ ಸಂಪೂರ್ಣ ವಿಫಲಗೊಂಡಿದೆ. ಬಡ ಮಹಿಳೆಯರು ಮೈಕ್ರೋ ಫೈನಾನ್ಸ್ ಸಾಲದ ಬಲೆಗೆ ಬಿದ್ದು ಅದನ್ನು ಮರುಪಾವತಿಸಲಾಗದೆ ಹೋರಾಟ ನಡೆಸುತ್ತಿದ್ದಾರೆ. ವಸೂಲಿಗಾರರು ಮನೆಮನೆಗೆ ಬಂದು ದಬ್ಬಾಳಿಕೆ ನಡೆಸುವುದು ಖಂಡನೀಯ ಎಂದರು.
ಆದ್ದರಿಂದ ಸಂತ್ರಸ್ತರಿಗೆ ಮುಂದಿನ 6 ತಿಂಗಳು ಮಾಸಿಕ ತಲಾ ₹7,500 ಪರಿಹಾರ ಹಾಗೂ ಮುಂದಿನ 6 ತಿಂಗಳು 14 ಅಗತ್ಯ ವಸ್ತುಗಳನ್ನು ಉಚಿತವಾಗಿ ರೇಶನ್ ಮೂಲಕ ನೀಡಬೇಕು. ಸಾರ್ವಜನಿಕ ರಂಗಗಳ ಮಾರಾಟ ಹಾಗೂ ಕಾರ್ಮಿಕ ಕಾನೂನುಗಳ ಅಮಾನತು ಮಾಡುವುದನ್ನು ತಡೆಯಬೇಕು.
ಕೆಲಸ ಕಳೆದುಕೊಂಡವರಿಗೆ ನಿರುದ್ಯೋಗ ಭತ್ತೆ ನೀಡಬೇಕು. ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು. ತಹಶೀಲ್ದಾರ್ ರಶ್ಮಿ ಎಸ್ ಆರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.