ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಲು ಸೋಂಕಿತರ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಲಸಿಕೆ ನೀಡುವಾಗ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆ ನೀಡಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಅವಲೋಕನ, ಪರಿಶೀಲನೆ ಹಾಗೂ ಪರಿವೀಕ್ಷಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, RAT ಟೆಸ್ಟ್, ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಿ. ಹಳ್ಳಿಗಳಲ್ಲಿ ಮನೆಮನೆಗೆ ಭೇಟಿ ನೀಡಿ ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸ ಮತ್ತಷ್ಟು ಜಾಸ್ತಿಯಾಗಲಿ ಎಂದರು.
ಇದೇ ವೇಳೆ, ಜಿಲ್ಲೆಯಲ್ಲಿ ಲಭ್ಯವಿರುವ ಬೆಡ್, ವೆಂಟಿಲೇಟರ್, ಸಿಲಿಂಡರ್, ಆಕ್ಸಿಜನ್ ಕಾನ್ಸನ್ಟ್ರೇಟರ್ಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಕ್ಕಳು ಸಹ ಕೋವಿಡ್ಗೆ ತುತ್ತಾಗುತ್ತಿದ್ದು, ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಿ. ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಮತ್ತು ಅವಶ್ಯಕತೆಗಳ ಬಗ್ಗೆ ಮಾಹಿತಿ ಪಡೆದರು.
ಲಸಿಕೆ ನೀಡುವ ಸಂಬಂಧ ಶಿಬಿರಗಳನ್ನು ಆಯೋಜಿಸಿ, 18 ವರ್ಷ ಮೇಲ್ಪಟ್ಟವರಿಗೆ , 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಆದ್ಯತಾ ವಲಯ ಕಾರ್ಯಕರ್ತರ ನಿಕಟ ಕುಟುಂಬ ಸದಸ್ಯರು, ಕೋವಿಡ್ ಕರ್ತವ್ಯದಲ್ಲಿರುವ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಚಾಲಕರು, ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ವಿದ್ಯುಚ್ಛಕ್ತಿ, ನೀರು ಪೂರೈಕೆ ಸಿಬ್ಬಂದಿ, ಅಂಚೆ ಇಲಾಖೆ ನೌಕರರು, ರಸ್ತೆ ಕಾಮಗಾರಿ ಮಾಡುವವರು, ಭದ್ರತಾ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ, ಕಚೇರಿಗಳಲ್ಲಿ, ನ್ಯಾಯಾಂಗ ಅಧಿಕಾರಿಗಳ ಬಳಿ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಹಿರಿಯರು ಮತ್ತು ರೋಗಿಗಳನ್ನು ನೋಡಿಕೊಳ್ಳುವವರು, ಮಕ್ಕಳ ರಕ್ಷಣಾ ಅಧಿಕಾರಿಗಳು, ಇವರಿಗೆ ಲಸಿಕೆ ನೀಡುವ ಕೆಲಸ ಕ್ಷಿಪ್ರ ಗತಿಯಲ್ಲಿ ಸಾಗಬೇಕು ಎಂದರು.