ಬೆಂಗಳೂರು: ರಾಜಧಾನಿಯಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಅಪರಾಧ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಅಪರಾಧದಲ್ಲಿ ಭಾಗಿಯಾಗುತ್ತಿದ್ದವರು ಲಾಕ್ಡೌನ್ನಿಂದಾಗಿ ಸೈಲೆಂಟ್ ಆಗಿದ್ದಾರೆ. ಕೊರೊನಾ ಕರ್ಫ್ಯೂ ಹಾಗೂ ಲಾಕ್ಡೌನ್ನಿಂದಾಗಿ ಮಹಾನಗರ ಸ್ತಬ್ಧವಾಗಿದೆ. ಆರ್ಥಿಕ ಚಟುವಟಿಕೆ ಸಂಪೂರ್ಣ ಕುಸಿದಿದೆ. ಜೀವನಕ್ಕಾಗಿ ಲಕ್ಷಾಂತರ ಜನರು ಮನೆ ಬಿಟ್ಟು ಊರು ಸೇರಿದ್ದಾರೆ. ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಗಳು ಗಪ್ ಚುಪ್ ಆಗಿದ್ದಾರೆ.
ಫೆಬ್ರವರಿಯಲ್ಲಿ ಹೆಚ್ಚಿದ್ದ ಅಪರಾಧ ಪ್ರಕರಣ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮೂರು ಪಟ್ಟು ಕಡಿಮೆಯಾಗಿದೆ. ಮಾರ್ಚ್ ನಲ್ಲಿ 3358 ಕೇಸ್ ದಾಖಲಾಗಿದೆ. ಏಪ್ರಿಲ್ನಲ್ಲಿ 2028 ಕೇಸ್ ವರದಿಯಾದರೆ, ಮೇ ಅಂತ್ಯಕ್ಕೆ 600 ಕೇಸ್ ದಾಖಲಾಗಿವೆ. ಈ ಪೈಕಿ ಸೈಬರ್ ಕ್ರೈಂ ಪ್ರಕರಣಗಳೇ ಅತಿ ಹೆಚ್ಚು ದಾಖಲಾಗಿದೆ. ದಾಖಲಾದ ಪ್ರಕರಣಗಳಲ್ಲಿ ಶೇಕಡವಾರು ಅರ್ಧ ಆನ್ ಲೈನ್ ಚೀಟಿಂಗ್ ಕೇಸ್ಗಳೇ ಆಗಿವೆ. ಉಳಿದಂತೆ ಕೊಲೆ, ದರೋಡೆ, ಕಳ್ಳತನ, ಸರಗಳ್ಳತನ, ಮನೆಗಳ್ಳತನ ಕೇಸ್ಗಳು ತೀರಾ ಕಡಿಮೆಯಾಗಿದೆ.
ಕೊರೊನಾ ಹೆಚ್ಚಾದ ವೇಳೆಯೂ ಅಪರಾಧ ಪ್ರಕರಣಗಳಲ್ಲಿ ಸೈಬರ್ ಕ್ರ್ರೈಂನದ್ದೇ ಮೇಲುಗೈಯಾಗಿದೆ. ಕೊರೊನಾ ಲಸಿಕೆಗೆ, ಬೆಡ್ ಕೊಡಿಸುವುದಾಗಿ ಹೇಳಿ ಆನ್ಲೈನ್ನಲ್ಲಿ ವಂಚನೆ ಮಾಡಿದ್ದಾರೆ. ಕೊರೊನಾ ಎರಡನೇ ಅಲೆ ಊಹೆಗೂ ಮೀರಿ ಹರಡಿದೆ. ಕೊರೊನಾ ಸೋಂಕಿನ ಸರಪಳಿ ಮುರಿಯಲು ರಾಜ್ಯ ಸರ್ಕಾರ ಕಳೆದ ಏಪ್ರಿಲ್ನಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿತ್ತು. ಇನ್ನಷ್ಟು ಪರಿಣಾಮಕಾರಿಯಾಗಲು ಇದೀಗ ಜೂ.14ರವರೆಗೆ ಲಾಕ್ಡೌನ್ ವಿಧಿಸಿದೆ.
ಕಟ್ಟಡ ಕಾರ್ಮಿಕರು ಸೇರಿದಂತೆ ಮಧ್ಯಮ ವರ್ಗದ ಜನರಂತೂ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಉಳಿದಿದ್ದಾರೆ. ಐಟಿಬಿಟಿ ನೌಕರರು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ಇದು ಆರೋಪಿಗಳಿಗೆ ಹಿನ್ನೆಡೆಯಾಗಿದೆ.
ಮಿತಿ ಮೀರಿದ ಕೊರೊನಾದಿಂದಾಗಿ ಕಳೆದ ತಿಂಗಳು ಏಪ್ರಿಲ್ 10ರಿಂದ ರಾತ್ರಿ ಕರ್ಫ್ಯೂ ಜಾರಿಯಾಗಿತ್ತು. ಈ ಅವಧಿಯಲ್ಲಿ ನಗರದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಮಾರ್ಚ್ನಲ್ಲಿ ನಗರದಲ್ಲಿ 3358 ಪ್ರಕರಣಗಳು ದಾಖಲಾದರೆ, ಏಪ್ರಿಲ್ನಲ್ಲಿ 2520 ಇಳಿಕೆಯಾಗಿವೆ. ಇದೇ ಅವಧಿಯಲ್ಲಿ ಮನೆ ಗಲಾಟೆ, ಕಿರುಕುಳ ಹಾಗೂ ಮತ್ತಿತರ ಕೌಟುಂಬಿಕ ಕಲಹ ಪ್ರಕರಣಗಳು ಹೆಚ್ಚಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯರು ಸೇರಿ 104 ಆರೋಪಿಗಳ ಬಂಧನ: ಕಾಳಸಂತೆಯಲ್ಲಿ ರೆಮ್ಡಿಸಿವರ್ ಮಾರಾಟ ದಂಧೆಯಲ್ಲಿ ಇದುವರೆಗೂ ವೈದ್ಯರು, ನರ್ಸ್ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ ಸೇರಿದಂತೆ ಇನ್ನಿತರರ ವಿರುದ್ಧ 56 ಪ್ರಕರಣ ದಾಖಲಿಸಿ 104 ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಅದೇ ರೀತಿ ಆಕ್ಸಿಜನ್ ದಂಧೆಯಲ್ಲಿ ಎಂಟು ಪ್ರಕರಣ ದಾಖಲಾಗಿ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕೊರೊನಾ ಬಿಕ್ಕಟ್ಟು ನಡುವೆಯೂ ಆಸ್ಪತ್ರೆಗಳಿಗೆ ಬರುತ್ತಿದ್ದ ರೆಮ್ಡಿಸಿವರ್ ವಯಲ್ಸ್ ಗಳನ್ನು ವೈದ್ಯಕೀಯ ಸಿಬ್ಬಂದಿಯೇ ಕಳ್ಳತನ ಮಾಡಿ ಕಾಳಸಂತೆಯಲ್ಲಿ ಸಾವಿರಾರು ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಈ ಮೂಲಕ ರೆಮ್ಡಿಸಿವರ್ ವಯಲ್ಸ್ಗಳನ್ನು ಕೃತಕ ಅಭಾವ ಸೃಷ್ಟಿ ಮಾಡಿದ್ದರು.