ನವದೆಹಲಿ: ಲೋಕಸಭೆಗೆ ನಡೆದ ಏಳು ಹಂತದ ಮತದಾನದ ಕ್ಲೈಮ್ಯಾಕ್ಸ್ ಇಂದು ಹೊರಬೀಳಲಿದೆ. ಇದರೊಂದಿಗೆ ಮತದಾರಪ್ರಭು ಯಾರ ಕೈಹಿಡಿಯಲಿದ್ದಾನೆ, ಮುಂದಿನ ಐದು ವರ್ಷಗಳ ಕಾಲ ದೇಶದ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬ ಕುತೂಹಲಕ್ಕೂ ಉತ್ತರ ದೊರೆಯಲಿದೆ.
ಒಟ್ಟು 43 ದಿನಗಳ ಕಾಲ 7 ಹಂತದಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯ ಮತ ಎಣಿಕೆ 8ಗಂಟೆಗೆ ಆರಂಭಗೊಳ್ಳಲಿದೆ. ಅದಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಹೊರಬಿದ್ದಿರುವ ಚುನಾವಣಾ ಸಮೀಕ್ಷೆಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಬಹುಮತ ದೊರೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ವಿಪಕ್ಷಗಳು ಇದನ್ನ ನಂಬಿಲ್ಲ.
ದೇಶದ ಒಟ್ಟು 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಮತದಾನವಾಗಿದ್ದು, ತಮಿಳುನಾಡಿನ ವೆಲ್ಲೂರಿನಲ್ಲಿ ವೋಟಿಂಗ್ ಆಗಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಿದ್ದ ಎನ್‌ಡಿಎ, ಯುಪಿಎ, ಮಹಾಘಟಬಂಧನ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷ, ಮಿತ್ರಕೂಟಗಳ ಹಣೆಬರಹ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ.
ಈ ಹಿಂದೆ 2014ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರೆ 150 ಸ್ಥಾನಗಳನ್ನು ಗೆದ್ದಿತ್ತು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು
- 542: ಮತದಾನ ನಡೆದ ಕ್ಷೇತ್ರ
- 271: ಮ್ಯಾಜಿಕ್ ನಂಬರ್
- 8,049: ಒಟ್ಟು ಅಭ್ಯರ್ಥಿಗಳು
- 67.11: ಮತದಾನ ಪ್ರಮಾಣ
- ಫಲಿತಾಂಶ 4 ಗಂಟೆ ವಿಳಂಬ
ಈಗಾಗಲೇ ಇವಿಎಂ ಮತಯಂತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ವಿಪಕ್ಷಗಳ ಬೇಡಿಕೆಯನ್ನ ಚುನಾವಣಾ ಆಯೋಗ ಕೂಡ ತಿರಸ್ಕರಿಸಿದೆ. ಮತ ಎಣಿಕೆ ಮುಕ್ತಾಯಗೊಂಡ ಬಳಿಕ ಮಾತ್ರ ವಿವಿಪ್ಯಾಟ್ ರಶೀದಿಗಳ ತಾಳೆ ಎಂದಿದೆ. ಇನ್ನು ಫಲಿತಾಂಶ ಹೊರಬೀಳಲಿರುವ ಕಾರಣ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
ಅಸೆಂಬ್ಲಿ ತೀರ್ಪು
ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗೆ ನಡೆದ ಚುನಾವಣೆ ತೀರ್ಪು ಸಹ ಇಂದು ಪ್ರಕಟವಾಗಲಿದೆ.