ಕೊಡಗು : ಕೊರೊನಾ ತಡೆಗೆ ಏನೇ ಮಾಡಿದ್ರೂ ನಿತ್ಯ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿವೆ. ಹಾಗಂತಾ, ಜಿಲ್ಲಾಡಳಿತ ಕೈಕಟ್ಟಿ ಕೂತಿಲ್ಲ. ನಿಯಂತ್ರಣಕ್ಕೆ ಸಾಕಷ್ಟು ಕ್ರಮಕೈಗೊಂಡಿದೆ.
ಇಂದಿನಿಂದ ಕೊಡಗು ವಾರದ 5 ದಿನ ಸಂಪೂರ್ಣ ಸ್ತಬ್ಧವಾಗಲಿದೆ. ಅಗತ್ಯ ವಸ್ತುಗಳ ಖರೀದಿಗೆ ಕೇವಲ ಎರಡು ದಿನ ಮಾತ್ರ ಅವಕಾಶ. ಹೀಗೊಂದು ಮಹತ್ತರವಾದ ನಿರ್ಧಾರವನ್ನ ಕೊಡಗು ಜಿಲ್ಲಾಡಳಿತ ತೆಗೆದುಕೊಂಡಿದೆ.
ಜಿಲ್ಲೆಯಲ್ಲಿ ಇಂದಿನಿಂದ ಕೊಡಗು ಸಂಪೂರ್ಣ ಲಾಕ್‌ಡೌನ್ ಆಗಿದೆ. ಜಿಲ್ಲೆಯಲ್ಲಿ ನಿತ್ಯ 500ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗುತ್ತಿವೆ.
ಜಿಲ್ಲಾಡಳಿತ ಏನೇ ಕ್ರಮ ಕೈಗೊಂಡ್ರೂ ಕೂಡ ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ, ಜಿಲ್ಲಾಡಳಿತ ಜಿಲ್ಲೆಯನ್ನ ಸಂಪೂರ್ಣವಾಗಿ 5 ದಿನ ಬಂದ್ ಮಾಡಲು ಮುಂದಾಗಿದೆ.
ವಾರದ ಮಂಗಳವಾರ ಮತ್ತು ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ 6 ರಿಂದ 12 ಗಂಟೆಯವರೆಗೆ ಅವಕಾಶ ಕಲ್ಪಿಸಿದೆ. ಇನ್ನು, ವಾರದ ಐದು ದಿನ ಪೇಪರ್, ಹಾಲು ಹಾಲಿನ ಉತ್ಪನ್ನಗಳಿಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನಿಡಲಾಗಿದೆ. ಇದನ್ನ ಹೊರತುಪಡಿಸಿ ಬೇಕಾಬಿಟ್ಟಿ ಓಡಾಡುತ್ತಿರುವ ವಾಹನಗಳಿಗೆ ಪೊಲೀಸರು ದಂಡ ವಿಧಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ಕೋವಿಡ್ ಪಾಸಿಟಿವಿಟಿ ರೇಟ್ನಲ್ಲಿ ಕೊಡಗು ಜಿಲ್ಲೆಯೇ ನಂಬರ್ ಒನ್. ಹಬ್ಬ-ಜಾತ್ರೆಗಳು, ಅದ್ದೂರಿ ವಿವಾಹಗಳೇ ಜಿಲ್ಲೆಗೆ ಮುಳ್ಳಾಯ್ತು. ಕಳೆದ ವಾರ ಬಿಡುಗಡೆಯಾಗಿದ್ದ ಕೋವಿಡ್ ಪಾಸಿಟಿವಿಟಿ ರೇಟ್ನಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ ಅಂತ ವರದಿ ಹೇಳ್ತಾ ಇದೆ.
ಹೆಚ್ಚು ಪ್ರಬುದ್ಧರೇ ತುಂಬಿರೋ ಕೊಡಗಿನಲ್ಲಿ ಇಂತಹ ಎಡವಟ್ಟು ಹೇಗೆ ನಡೆಯಿತು ಅಂತ ಕಾರಣ ಹುಡುಕುತ್ತಾ ಹೊರಟಾಗ ಕಂಡು ಬಂದಿದ್ದು ಹಲವು ಆಘಾತಕಾರಿ ಅಂಶಗಳು.
ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಇಷ್ಟೊಂದು ಸ್ಫೋಟವಾಗಲು ಕಾರಣ ಏಪ್ರಿಲ್ ತಿಂಗಳಿನಲ್ಲಿ ನಡೆದ ಹಬ್ಬ ಮತ್ತು ಜಾತ್ರೆಗಳು. ಜಿಲ್ಲೆಯ ಮೂಲೆ ಮೂಲೆಯಲ್ಲೂ ನೂರಾರು ಹಬ್ಬಗಳು ನಡೆದಿವೆ. ಜನ್ರೂ ಕೂಡ ಬಹಳ ಉತ್ಸಾಹದಿಂದ ಹಬ್ಬಗಳಲ್ಲಿ ಪಾಲ್ಗೊಂಡಿದ್ದಾರೆ.
ಈ ಸಂದರ್ಭ ಮಾಸ್ಕ್, ಸಾಮಾಜಿಕ ಅಂತರ ಮರೆತಿದ್ದಾರೆ. ಇದೇ ಕಾರಣದಿಂದಾಗಿ ವೈರಸ್ ಬಹಳ ವೇಗವಾಗಿ ಹರಡಿದೆ ಅದೂ ಅಲ್ದೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬಹಳಷ್ಟು ಅದ್ದೂರಿ ವಿವಾಹಗಳೂ ನಡೆದಿವೆ.
ಲಾಕ್‌ಡೌನ್ ಘೋಷಣೆಗೂ ಮೊದಲೇ ಈ ಮದುವೆಗಳು ನಡೆದಿವೆಯಾದ್ರಿಂದ ಯಾವುದೇ ನಿಯಂತ್ರಣಗಳು ಇರಲಿಲ್ಲ. ನೆಪ ಮಾತ್ರಕ್ಕೆ ಕಾನೂನುಗಳ ಪಾಲನೆಯಾದ್ದವು. 50 ಜನ್ರು ಸೇರೋ ಜಾಗದಲ್ಲಿ 500 ಮಂದಿ ಸೇರಿದ್ದರು.
ಜೊತೆಗೆ ಲಾಕ್‌ಡೌನ್ ಘೋಷಣೆಯಾಗ್ತಲೇ ಹೊರ ಜಿಲ್ಲೆಗಳಲ್ಲಿ ನೆಲೆಸಿರೋ ಕೊಡಗಿನ ಮಂದಿ ಸಾಗರೋಪಾದಿಯಲ್ಲಿ ಜಿಲ್ಲೆಗೆ ಮರಳಿದ್ದಾರೆ. ಬರುತ್ತಲೇ ವೈರಸ್ ಹೊತ್ತು ತಂದು ಹರಡಿದ್ದಾರೆ. ಹಾಗಾಗಿ, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗಿದೆ. ಇದು ಸಹಜವಾಗಿಯೇ ಜಿಲ್ಲೆಯ ನಾಗರಿಕರಲ್ಲಿ ಬಹಳ ಆತಂಕ ಮೂಡಿಸಿದೆ.
ಕಳೆದ ಒಂದು ವರ್ಷದಿಂದ ಜಿಲ್ಲಾಡಳಿತ ಬಹಳ ಕಷ್ಟಪಟ್ಟು ಕೊರೊನಾಗೆ ಕಡಿವಾಣ ಹಾಕಿತ್ತು. ಆದ್ರೆ, ಈ ಬಾರಿಯ ಎರಡನೇ ಅಲೆ ಮಾತ್ರ ಹೆಚ್ಚು ಯುವಕರನ್ನೇ ಬಲಿ ಪಡೆದುಕೊಳ್ತಿದೆ.
ಇದೆಲ್ಲವನ್ನ ಮಟ್ಟ ಹಾಕಲು ಕೊಡಗು ಜಿಲ್ಲಾಡಳಿತ ಕೊಡಗು ಲಾಕ್‌ಡೌನ್ ಮಾಡಿದೆ. ಇನ್ನಾದ್ರು ಜಿಲ್ಲೆಯಲ್ಲಿ ಕೋವಿಡ್ ಕಂಟ್ರೋಲ್ಗೆ ಬರುತ್ತಾ ಇಲ್ಲ ಇದೇ ರೀತಿ ಮುಂದುವರೆಯುತ್ತಾ ಅಂತ ಕಾದು ನೋಡಬೇಕಿದೆ.