ಬೆಂಗಳೂರು : ನಿನ್ನೆ ನಿಧನರಾದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಾ ಪುಷ್ಪ ಅಮರನಾಥ್ ಸೇರಿದಂತೆ ಹಲವು ನಾಯಕರು ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ದಿಢೀರ್ ನಿಧನ ಸುದ್ದಿ ಕೇಳಿ ಆಘಾತವಾಗಿದೆ.
ದೇಶದಲ್ಲಿ ಕರ್ನಾಟಕ ರಾಜ್ಯದ ಅತ್ಯಂತ ಜನಪ್ರಿಯ ಕಾನೂನು ತಜ್ಞರೊಬ್ಬರನ್ನು ಕಳೆದುಕೊಂಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಬರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಮಾಜಿ ಡಿಸಿಎಂ ಜಿ ಪರಮೇಶ್ವರ್ ಟ್ವೀಟ್ ಮಾಡಿದ್ದು, ಕಾನೂನು ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಕೊಡುಗೆ ನೀಡಿದ ಹಾಗೂ ನ್ಯಾಯಕ್ಕಾಗಿ ತಮ್ಮನ್ನ ಮುಡಿಪಾಗಿಸಿಕೊಂಡಿದ್ದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ನಿಧನ ಆಘಾತ ತಂದಿದೆ.
ಕಾನೂನು ಕ್ಷೇತ್ರದಲ್ಲಿ ಇವರ ಕಾರ್ಯ ಹಾಗೂ ಕೊಡುಗೆ ಅವಿಸ್ಮರಣೀಯ. ತುಂಬಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಟ್ವೀಟ್ ಮಾಡಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕನ್ನಡಿಗರಾದ ಶ್ರೀ ಮೋಹನ್ ಎಂ. ಶಾಂತನಗೌಡರ್ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗದವರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.