ಕಲಬುರಗಿ: ಸೋಲು-ಗೆಲುವು ಪ್ರಜಾಪ್ರಭುತ್ವದ ಗುಣ. ಸೋಲಿಗೆ ಕಾರಣ ಏನು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.
ಫಲಿತಾಂಶದ ಬಳಿಕ ಮಾಧ್ಯಮದೊಂದಿಗೆ ಜೊತೆ ಮಾತನಾಡಿದ ಅವರು, ದೇಶಾದ್ಯಂತ ಕಾಂಗ್ರೆಸ್ಗೆ ಹಿನ್ನೆಡೆಯಾಗಿದೆ. ಕಲಬುರಗಿ ಲೋಕಸಭೆ ಚುನಾವಣೆಯಲ್ಲೂ ನನಗೆ ಸೋಲಾಗಿದೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಇವಿಎಂಗಳ ಬಗ್ಗೆ ನಮ್ಮ ದೂರು ಈಗಿನದಲ್ಲ, ಮೊದಲಿನಿಂದಲೂ ನಾವು ಅನುಮಾನ ಪಡುತ್ತಲೇ ಬಂದಿದ್ದೇವೆ. ಹಾಗೆಂದು ಫಲಿತಾಂಶದ ಬಗ್ಗೆ ಕುಂಟು ನೆಪ ಹೇಳಲು ನಾನು ಇಷ್ಟಪಡುವುದಿಲ್ಲ. ಸೋತಿದ್ದು ಆಗಿದೆ, ಅದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಜನ ನನ್ನ ವಿರುದ್ಧ ತೀರ್ಪು ನೀಡಿದ್ದಾರೆ, ಸ್ವೀಕಾರ ಮಾಡಲೇಬೇಕು. ನನಗೆ ಮತ ನೀಡಿದವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಅವರು,ಲೋಕಸಭೆ ಚುನಾವಣೆ ಫಲಿತಾಂಶ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭವಿಷ್ಯ ನುಡಿದರು.