ಧಾರವಾಡ : ಜಿಲ್ಲೆಯಲ್ಲಿ ನಾಳೆ (ಮೇ 22ರ) ಬೆಳಗ್ಗೆ 6 ರಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಿ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದೆ.
ಸಾರ್ವಜನಿಕರು ಸಹಕಾರ ನೀಡಿ, ಕೋವಿಡ್ ತಡೆಗಟ್ಟುವುದಕ್ಕಾಗಿ ಲಾಕ್‍ಡೌನ್ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ವಿನಂತಿಸಿದರು.
ಧಾರವಾಡ ಮಾಧ್ಯಮ ಪ್ರತಿನಿಧಿಗಳೊಂದಿಗೆ ಆನ್‍ಲೈನ್ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಲಾಕ್‍ಡೌನ್ ಅವಧಿಯ ಎರಡು ದಿನ ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ನಾಗರಿಕರು ತಮ್ಮ ಮನೆಗೆ ಹತ್ತಿರವಿರುವ ಅಂಗಡಿಯಿಂದ ಹಾಲು, ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.
ಆಸ್ಪತ್ರೆ, ಔಷಧ ಅಂಗಡಿ ಎಂದಿನಂತೆ ತೆರೆದಿರುತ್ತವೆ. ಸರಕು ವಾಹನ, ಸರ್ಕಾರಿ ವಾಹನ ಹಾಗೂ ಕೋವಿಡ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆಹಾರ ಸಂಸ್ಕರಣಾ ಘಟಕಗಳು, ಕೆಲವು ನಿರ್ದಿಷ್ಟ ಕೈಗಾರಿಕೆಗಳಿಗೆ ಮಾತ್ರ ಅವಕಾಶವಿದೆ.
![ಧಾರವಾಡ ಸಂಪೂರ್ಣ ಲಾಕ್‍ಡೌನ್](https://etvbharatimages.akamaized.net/etvbharat/prod-images/08:19:47:1621608587_kn-dwd-3-dc-vertual-pm-ka10001_21052021192028_2105f_1621605028_738.jpg)
ಉಳಿದಂತೆ ಎಲ್ಲ ಕೈಗಾರಿಕೆ, ಕಟ್ಟಡ ನಿರ್ಮಾಣ, ಕಿರಾಣಿ ಅಂಗಡಿ, ಹೋಟೆಲ್ ಸೇರಿದಂತೆ ಎಲ್ಲವುಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದರು.
ಕೃಷಿ ಚಟುವಟಿಕೆಗೆ ಪೂರಕವಾದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರು ಬೆಳಗ್ಗೆ ಅನುಮತಿಸಿರುವ ಅವಧಿಯಲ್ಲಿ ತಮ್ಮ ಗ್ರಾಮ ಅಥವಾ ಸಮೀಪದ ಹೋಬಳಿ, ತಾಲೂಕುಗಳಿಂದ ಖರೀದಿಸಬೇಕು. ಸಮಯ ಮೀರಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗ್ರಾಮ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರ ತೆರೆಯಲು ಅನುಮತಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಅನುಗುಣವಾಗಿ ಕೋವಿಡ್ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಧಾರವಾಡದ ಬಿ.ಡಿ.ಜತ್ತಿ, ಸಿ.ಬಿ.ಗುತ್ತಲ್, ಕವಿವಿ ಆವರಣದ ವಿದ್ಯಾರ್ಥಿನಿಯರ ವಸತಿ ನಿಲಯ, ಹುಬ್ಬಳ್ಳಿಯ ದೇಶಪಾಂಡೆ ಫೌಂಡೇೆಶನ್, ಸಂಜೀವಿನಿ ಆಯುರ್ವೆದ ಮಹಾ ವಿದ್ಯಾಲಯ ಹಾಗೂ ವಿವಿಧ ಸರ್ಕಾರೇತರ ಸಂಘ- ಸಂಸ್ಥೆಗಳು ಆರಂಭಿಸಿರುವ ಕಾಳಜಿ ಕೇಂದ್ರಗಳು ಮತ್ತು ಪ್ರತಿ ತಾಲೂಕು ಕೇಂದ್ರ ಸ್ಥಾನದಲ್ಲಿ 100 ಬೆಡ್‍ಗಳ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ಆದರೆ, ಬಹುತೇಕರು ಹೋಮ್ ಐಸೋಲೆಷನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತು ಅಗತ್ಯವಿದ್ದರೆ ಪ್ರತಿ ಗ್ರಾಮ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಗ್ರಾಮಮಟ್ಟದ ಕೋವಿಡ್ ಕಾರ್ಯಪಡೆಗಳಿಗೆ ಸೂಚಿಸಲಾಗಿದೆ. ಅಲ್ಲಿ ಅಗತ್ಯವಿರುವ ಔಷಧಿ. ಆಹಾರ ಮತ್ತು ಇತರೆ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.