ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳಲ್ಲಿ ಸ್ಥಾಪಿಸಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳುಗಳನ್ನು ಸ್ಥಳಾಂತರಿಸುವ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ಬೆಸ್ಕಾಂ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ನಗರದ ಪಾದಚಾರಿ ಮಾರ್ಗ ಹಾಗೂ ರಾಜಕಾಲುವೆಗಳ ಮೇಲಿರುವ ಟ್ರಾನ್ಸ್ಫಾರ್ಮರ್ಗಳು ಸಾರ್ವಜನಿಕರಿಗೆ ಅಪಾಯಕಾರಿಯಾಗಿದ್ದು, ಅವುಗಳನ್ನು ತೆರವುಗೊಳಿಸಲು ಸಂಬಂಧಿಸಿದ ಪ್ರಾಧಿಕಾರಗಳಿಗೆ ಆದೇಶಿಸಬೇಕೆಂದು ಕೋರಿ ನಿವೃತ್ತ ವಿಂಗ್ ಕಮಾಂಡರ್ ವಿ.ಜಿ ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಬೆಸ್ಕಾಂ ಪರ ವಕೀಲರು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ನಗರದ ಎಂಟು ವಲಯಗಳಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಸ್ಥಳಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಲು ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ. ಸಮಿತಿ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಸದ್ಯದಲ್ಲೇ ಶಿಫಾರಸು ನೀಡಲಿದೆ. ಅದಕ್ಕಾಗಿ ಕಾಲಾವಕಾಶ ನೀಡಬೇಕೆಂದು ಕೋರಿದರು. ಹೇಳಿಕೆ ಪರಿಗಣಿಸಿದ ಪೀಠ, ಸಮಿತಿ ಜುಲೈ 20ರೊಳಗೆ ವರದಿ ಸಲ್ಲಿಸಬೇಕೆಂದು ಸೂಚಿಸಿ, ಜುಲೈ 22ಕ್ಕೆ ವಿಚಾರಣೆ ಮುಂದೂಡಿತು.