ಕಾರವಾರ: ಸಾಮಾನ್ಯವಾಗಿ ಬ್ಯಾಂಕ್ಗಳಲ್ಲಿ ಸಾಲ ಪಡಿಯಬೇಕು ಅಂದ್ರೆ ಹತ್ತಾರು ದಾಖಲೆಗಳ ಜತೆಗೆ ಅಷ್ಟೆ ತಿರುಗಾಡಬೇಕು. ಆದರೆ ಇಲ್ಲೊಂದು ಸೊಸೈಟಿಯಲ್ಲಿ ರೈತರು ಬಾರದೆ ಇದ್ದರೂ ಅವರ ಖಾತೆಯಿಂದ ಲಕ್ಷಾಂತರ ರೂ ವಿತ್ ಡ್ರಾ ಆಗಿದೆ. ಆಶ್ಚರ್ಯ ಅಂದ್ರೆ ಮೃತಪಟ್ಟವರ ಹೆಸರಿನಲ್ಲಿಯೂ ಸಾಲ ಮಂಜೂರಾಗಿದ್ದು, ದಾಖಲೆಪತ್ರಗಳಿಲ್ಲದೆ ರೈತರ ಹೆಸರಿನಲ್ಲಿ ಕೋಟಿ ಕೋಟಿ ಸಾಲ ವಿತರಿಸಿರುವುದು ಬೆಳಕಿಗೆ ಬಂದಿದೆ.
ಹೌದು ಇಂತಹದೊಂದು ಅವ್ಯವಹಾರ ಬೆಳಕಿಗೆ ಬಂದಿರುವುದು ಕುಮಟಾ ತಾಲ್ಲೂಕಿನ ಬರಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ. ಬರಗದ್ದೆ ಸುತ್ತಮುತ್ತಲಿನ ಸುಮಾರು 300 ರೈತರಿಗೆ ಇದೀಗ ಮೋಸವಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಬ್ಯಾಂಕ್ನಲ್ಲಿ ಸಾಲ ಪಡೆಯದೇ ತಮ್ಮ ಖಾತೆಯಿಂದ ಲಕ್ಷಾಂತರ ರೂ ವಿತ್ ಡ್ರಾ ಆಗಿರುವ ಮೊಬೈಲ್ ಮೆಸೆಜ್ ನೋಡಿ ರೈತರು ಕಂಗಾಲಾಗಿದ್ದಾರೆ.
ಬರಗದ್ದೆ ನಿಲಕೋಡ್, ಯಲವಳ್ಳಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ 300 ಕ್ಕೂ ಹೆಚ್ಚು ಜನರು ಬರಗದ್ದೆ ಸೊಸೈಟಿಯಲ್ಲಿ ವ್ಯವಹಾರ ನಡೆಸುತ್ತಾ ಬಂದಿದ್ದಾರೆ. ಕಳೆದ ವರ್ಷ ಬೆಳೆ ಸಾಲ ಪಡೆದುಕೊಂಡಿದ್ದ ರೈತರಿಗೆ ಸಿದ್ದರಾಮಯ್ಯ ಸರ್ಕಾರ ಮನ್ನಾ ಮಾಡಿದ್ದ ಹಣವನ್ನು ರೈತರಿಗೆ ನೀಡಿರಲಿಲ್ಲ. ಈ ನಡುವೆ ರೈತರ ಮನೆಗೆ ತೆರಳಿದ ಕೆಡಿಸಿ ಬ್ಯಾಂಕ್ ಸಿಬ್ಬಂದಿ ಮತ್ತು ಸೊಸೈಟಿ ಕಾರ್ಯದರ್ಶಿ ಲಕ್ಷ್ಮಷ ಪಟಗಾರ ಸಾಲಮನ್ನಾದ ಅರ್ಜಿ ಸಲ್ಲಿಸಿದ ರೈತರಿಂದ ಎರಡು ವಿತ್ಡ್ರಾ ಚೆಕ್ಗಳನ್ನು ನೀಡಿ ಸಹಿ ಪಡೆದುಕೊಂಡಿದ್ದರು. ಬಳಿಕ ರೈತರ ಖಾತೆಯಲ್ಲಿ ಮೊದಲಿದ್ದ ಸಾಲದ ಮೊತ್ತಕ್ಕೆ ಹೊಸದಾಗಿ ಲಕ್ಷಾಂತರ ರೂಪಾಯಿ ಸಾಲ ಪಡೆದು ಒಟ್ಟು ಮೊತ್ತದ ಹಣವನ್ನು ವಿತ್ಡ್ರಾ ಮಾಡಿದ್ದರು. ಆದರೆ ಈ ಹಣ ರೈತರಿಗೆ ಸಿಗದೆ ಅವ್ಯಹಾರ ನಡೆಸಲಾಗಿದೆ.
ಇನ್ನು ಸೊಸೈಟಿಯಲ್ಲಿ ಕಳೆದ ಮೂರು ವರ್ಷದ ಹಿಂದೆ ಮೃತಪಟ್ಟ ಬೈರುಗೌಡ ಎಂಬುವವರ ಹೆಸರಿಗೂ ಸಾಲ ತೆಗೆಯಲಾಗಿದೆ. ಅಲ್ಲದೆ ಒಂದೇ ಕುಟುಂಬದ ನಾಲ್ವರಿಗೆ ಸಾಲ ಮಂಜೂರು ಮಾಡಲಾಗಿದೆ. ಆದರೆ ಈ ಬಗ್ಗೆ ಕೆಡಿಸಿಸಿ ಅಧಿಕಾರಿಗಳನ್ನು ಕೇಳಿದರೆ ಕಳೆದ ಒಂದು ವಾರದಿಂದ ನಿಮ್ಮ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ ಈಗಾಗಲೇ ವಿತ್ ಡ್ರಾ ಆದ ಹಣವನ್ನು ಬ್ಯಾಂಕ್ ಮತ್ತೆ ನೀಡುವ ಬಗ್ಗೆ ನಮಗೆ ಯಾವುದೇ ಖಾತರಿ ಇಲ್ಲ. ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಂದ ವಸೂಲಿ ಮಾಡಿ ರೈತರಿಗೆ ನೀಡಬೇಕು ಎಂದು ಇಂದು ಕುಮಟಾ ಕೆಡಿಸಿಸಿ ಬ್ಯಾಂಕ್ಗೆ ಮುತ್ತಿಗೆ ಹಾಕಿದ ರೈತರು ಒತ್ತಾಯಿಸಿದ್ದಾರೆ.
ಇನ್ನು ಅವ್ಯವಹಾರ ಬಗ್ಗೆ ತಿಳಿಯುತ್ತಿದ್ದಂತೆ ಶಾಸಕ ದಿನಕರ ಶೆಟ್ಟಿ, ಜಿ.ಪಂ. ಸದಸ್ಯ ಗಜಾನನ ಪೈ ಆಗಮಿಸಿ ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದರು. ಈ ವೇಳೆ ಸ್ಥಳಕ್ಕೆ ಆಗಮಿಸಿ ಕೆಡಿಸಿಸಿ ಬ್ಯಾಂಕ್ ಕುಮಟಾ ಶಾಖೆಯ ಮ್ಯಾನೇಜರ್ ಮತ್ತು ಶಿರಸಿ ಕೆಡಿಸಿಸಿ ಬ್ಯಾಂಕ್ ನ ತನಿಖಾಧಿಕಾರಿಗಳು ಹಣ ನೀಡುವ ಭರವಸೆ ನೀಡಿದರು.