ಕೋಲಾರ: ಚಿಕಿತ್ಸೆ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯರು ಹಾಗೂ ಕೊರೊನಾ ಸೋಂಕಿತ ಸಂಬಂಧಿಯ ನಡುವೆ, ಶಾಸಕರ ಎದುರೇ ಜಟಾಪಟಿ ನಡೆದಿರುವ ಘಟನೆ ಕೋಲಾರದ ಮಾಲೂರಿನಲ್ಲಿ ಜರುಗಿದೆ.
ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ರತ್ನ ಆಸ್ಪತ್ರೆ ಬಳಿ ಈ ಘಟನೆ ಜರುಗಿದೆ. ಮಾಲೂರು ಪಟ್ಟಣದ ರತ್ನ ಆಸ್ಪತ್ರೆಗೆ ಸೋಂಕಿತನೋರ್ವ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕಿತನಿಗೆ ವೆಂಟಿಲೇಟರ್ ಸೌಲಭ್ಯ ಬೇಕಾಗಿದ್ದು, ಸೌಲಭ್ಯ ಕಲ್ಪಿಸುವಂತೆ ಸಂಬಂಧಿಕರು ಆಗ್ರಹ ಮಾಡಿದ್ದಾರೆ. ಆದರೆ, ಆಸ್ಪತ್ರೆಯವರು ವೆಂಟಿಲೇಟರ್ ಸೌಲಭ್ಯ ಇಲ್ಲ, ಸೋಂಕಿತನನ್ನ ಬೇರೆಡೆಗೆ ಸ್ಥಳಾಂತರಿಸುವಂತೆ ತಿಳಿಸಿದರು.
ಅಲ್ಲದೇ ಸೋಂಕಿತ ಆಸ್ಪತ್ರೆಗೆ ದಾಖಲಾದಾಗಿನಿಂದ ಸೂಕ್ತ ರೀತಿಯ ಚಿಕಿತ್ಸೆ ನೀಡದೆ, ಬರೀ ದುಡ್ಡು ಕಟ್ಟಿಸಿಕೊಳ್ಳುತ್ತಿದ್ದಾರೆಂದು ಸೋಂಕಿತನ ಸಂಬಂಧಿಕರು ಆರೋಪಿಸಿದರು. ಜೊತೆಗೆ ತಾವು ಕೇಳಿದಾಗ ಮಾತ್ರ ಸೋಂಕಿತನಿಗೆ ಮಾತ್ರೆ ಔಷಧ ನೀಡುತ್ತಾರೆ. ಉಳಿದಂತೆ ಬೇಜವಾಬ್ದಾರಿ ಹೇಳಿಕೆಗಳನ್ನ ನೀಡುತ್ತಿದ್ದಾರೆಂದರು. ಶಾಸಕ ನಂಜೇಗೌಡ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ, ವೈದ್ಯರು ಹಾಗೂ ಸೋಂಕಿತನ ಸಂಬಂಧಿಕರ ನಡುವೆ ಜಟಾಪಟಿ ನಡೆಯಿತು.
ಕಳೆದೊಂದು ವಾರದಿಂದ ಬಿಡುವಿಲ್ಲದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಸಾಮರ್ಥ್ಯಕ್ಕೂ ಮೀರಿ ಕಾರ್ಯನಿರ್ವಹಿಸುತ್ತಿರುವುದಾಗಿ, ವೈದ್ಯರು ಶಾಸಕರ ಎದುರು ಅಳಲು ತೋಡಿಕೊಂಡರು. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕ ನಂಜೇಗೌಡ ಅವರು ಸಮಾಧಾನಪಡಿಸಿದರು.