ಭಟ್ಕಳ: ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ ಹೊನ್ನಾವರ ಮೂಲದ ಅಣ್ಣ- ತಂಗಿ ಭಟ್ಕಳಕ್ಕೆ ಮರಳಲು ದುಬೈನ ಭಟ್ಕಳಿಗರು ಸಹಾಯ ಮಾಡಿದ್ದು, ಅಣ್ಣ-ತಂಗಿ ಇಬ್ಬರೂ ದುಬೈ ಭಟ್ಕಳಿಗರ ಸಹಾಯಕ್ಕೆ ಕೃತಜ್ಞತೆ ಅರ್ಪಿಸಿದ್ದಾರೆ.
ಹೊನ್ನಾವರ ತಾಲೂಕಿನ ಮಂಕಿಯ ನಿವಾಸಿ ಸಂತೋಷ ಮತ್ತು ಅವರ ಸಹೋದರಿ ಸುಮಾ ಎಂಬುವವರು ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಊರಿಗೆ ಬರಲು ಅಲ್ಲಿ ನೆಲಸಿರುವ ಭಟ್ಕಳ ನಿವಾಸಿಗಳು ಸಹಾಯ ಮಾಡಿದ್ದು, ಅವರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತಂತೆ ದುಬೈ ರಾಸ್-ಅಲ್-ಖೈಮಾ ವಿಮಾನ ನಿಲ್ದಾಣದಲ್ಲಿ ಭಟ್ಕಳದ ಅನ್ಲೈನ್ ಮಾಧ್ಯಮದೊಂದಿಗೆ ಮಾತನಾಡಿದ ಸಂತೋಷ್, ನಾನು ಬಹಳ ದಿನಗಳಿಂದ ದುಬೈಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಜೊತೆ ನನ್ನ ತಂಗಿಯೂ ಇದ್ದಾಳೆ. ಅವಳ ಮದುವೆ ದಿನಾಂಕ ನಿಗದಿಯಾಗಿದ್ದು, ಊರಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಭಟ್ಕಳದವರು ನಮಗೆ ತುಂಬಾ ಸಹಾಯ ಮಾಡಿದ್ದಾರೆ. ನಮಗೆ ವಿಮಾನದಲ್ಲಿ ಟಿಕೆಟ್ ಕೊಟ್ಟಿದ್ದಲ್ಲದೆ, ನಮಗೆ ಊಟ ನೀಡಿ ಉಪಚರಿಸಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾನು ಟಿಕೆಟ್ ಪಡೆಯಲು ಅವರ ಕಚೇರಿಗೆ ಹೋದಾಗ ಅವರು ನನ್ನನ್ನು ತಮ್ಮ ಮನೆಯವರಂತೆ ಉಪಚರಿಸಿದರು. ಇಲ್ಲಿ ನನ್ನವರೂ ಇದ್ದಾರೆ ಎನ್ನುವ ಭಾವನೆ ನನ್ನಲ್ಲಿ ಮೂಡಿತು. ನನ್ನ ಮದುವೆ ಇರುವ ಕಾರಣ ನಾನು ಊರಿಗೆ ಹೋಗುತ್ತಿದ್ದೇನೆ. ಭಟ್ಕಳದ ಜನ ನಮಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಸುಮಾ ಧನ್ಯವಾದ ಅರ್ಪಿಸಿದರು.