ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರ ಪರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪಾಪ ಅವರು ವೈಯಕ್ತಿಕವಾಗಿ ಏನೋ ಮಾತಾಡಿದ್ದಾರೆ. ಅವರದೇ ಧ್ವನಿ ಇದಿಯೋ.. ಇಲ್ವೋ.. ಅನ್ನೋದು ಗೊತ್ತಿಲ್ಲ. ಅವರೇ ಹೇಳಿದ್ದಾರೆ ಧ್ವನಿ ನನ್ನದು ಅಲ್ಲಾ ಅಂತಾ. ಅಷ್ಟೇ ಅಲ್ಲದೇ ಈ ಬಗ್ಗೆ ತನಿಖೆ ಸಹ ನಡೆಯಲಿ ಎಂದಿದ್ದಾರೆ. ಖಾಸಗಿಯಾಗಿ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಳ್ಳೊದು ಅಪರಾಧ ಎಂದರು.
ತಮ್ಮ ಆತ್ಮೀಯರ ಮುಂದೆ ಮಾತಾಡಿರುತ್ತಾರೆ. ವ್ಯಕ್ತಿಗತ ಗೌಪ್ಯತೆಗೆ ರಾಜ್ಯದಲ್ಲಿ ಭದ್ರತೆ ಎಲ್ಲಿದೆ?. ರಾಜ್ಯದಲ್ಲಿ ಏನು ಬೇಕಾದ್ದು ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಸಿಬಿಯವರು ಏನ್ ಮಾಡ್ತಿದ್ದಾರೆ? ಎಂದು ಯತ್ನಾಳ ಪ್ರಶ್ನಿಸಿದರು.
ಸಿಸಿಬಿ ಕೆಲಸವಿರದ ತನಿಖೆಗಳನ್ನೆಲ್ಲ ಮಾಡ್ತಾರೆ. ಡ್ರಗ್ಸ್ ಕೇಸ್, ಯುವರಾಜ್ ಕೇಸ್ ಅರ್ಧಕ್ಕೆ ಬಿಟ್ಟರು. ಸಿಸಿಬಿಯಲ್ಲಿರುವ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ ಎಂದರು. ವಿಜಯೇಂದ್ರರಿಗೆ ಆಪ್ತರಿರೋದು ಸಿಸಿಬಿಯಲ್ಲಿದ್ದಾರೆ. ಕಣ್ಣು ತೆರೆದು ನೋಡಲಿ ಎಂದು ವಿಜಯೇಂದ್ರ ವಿರುದ್ಧ ಹರಿಹಾಯ್ದರು.
ಶಾಸಕಾಂಗ ಸಭೆ: ಇದೇ 26ಕ್ಕೆ ನಡೆಯಲಿರುವ ಶಾಸಕಾಂಗ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ ನಮಗೆ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಶಾಸಕಾಂಗ ಸಭೆಗೆ ಕರೆದರೆ ನಾನೂ ಹೋಗ್ತೀನಿ. ಶಾಸಕಾಂಗ ಸಭೆ ಅಂದಾಗ ಹೋಗಲೇ ಬೇಕಾಗುತ್ತೆ. ಇದನ್ನ ನಾವು ಉಪಯೋಗ ಮಾಡಿಕೊಳ್ಳುತ್ತೇನೆ. ನಾವು ಏನ್ ಹೇಳ್ಬೇಕೋ ಶಾಸಕಾಂಗ ಸಭೆಯಲ್ಲಿ ಹೇಳ್ತೀವಿ ಎಂದರು.
ಕಾದು ನೋಡಿ: ಇದೇ ವೇಳೆ ತಾವು ಗಡ್ಡ ಬಿಟ್ಟಿರುವ ವಿಷಯ ಪ್ರಸ್ತಾಪಿಸಿದ ಅವರು, ಕಾದು ನೋಡಿ ಜುಲೈ 30ರವರೆಗೆ ಮತ್ತೆ ಹಳೆ ಯತ್ನಾಳ ಆಗುತ್ತೇನೆ ಎಂದು ಮಾರ್ಮಿಕವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರಾಜಕೀಯ ಬದಲಾವಣೆಯ ಹೊಸ ಸುಳಿವು ನೀಡಿದರು.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜುಲೈ 30ರ ಬಳಿಕ ನಾನು ಮತ್ತೆ ಮೊದಲಿನ ಯತ್ನಾಳನಂತೆ ಆಗ್ತೇನೆ. ಹರಕೆ ಹೊತ್ತಿದ್ದೀನಿ. ನಾವು ಹಿಂದೂಗಳು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುತ್ತೇವೆ ಎಂದರು.