ಕಾರವಾರ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕೇಳಿದ್ರೇ ವಾಹನಗಳ ಸಹವಾಸವೇ ಬೇಡ ಅನ್ಸುತ್ತೆ. ಹಾಗಾಗಿ, ಈಗ ಎಲೆಕ್ಟ್ರಿಕ್ ಮೋಟಾರು ವಾಹನಗಳಿಗೆ ಎಲ್ಲೆಡೆ ಬೇಡಿಕೆ ಹೆಚ್ಚ ತೊಡಗಿದೆ. ಇದ್ರಿಂದ ಪ್ರೇರೇತರಾದ ಈ ವಿದ್ಯಾರ್ಥಿಗಳಿಬ್ಬರು ಕಡಿಮೆ ವೆಚ್ಚದ ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕಾರವಾರ ನಗರದ ಸೇಂಟ್ ಜೋಸೆಫ್ ಕಾಲೇಜಿನ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ತನ್ವಿ ಚಿಪ್ಕರ್ ಹಾಗೂ ಕುನಾಲ್ ತಮ್ಮ ಸೈಕಲ್‌ಗಳನ್ನೇ ಬ್ಯಾಟರಿ ಚಾಲಿತ ಸೈಕಲ್‌ಗಳನ್ನಾಗಿ ಪರಿವರ್ತಿಸಿದ್ದಾರೆ. ಸುಮಾರು ಒಂದು ತಿಂಗಳ ಪರಿಶ್ರಮದ ಬಳಿಕ ಬ್ಯಾಟರಿ ಚಾಲಿತ ಇಕೋ ಫ್ರೆಂಡ್ಲಿ ಸೈಕಲ್ ಸಿದ್ಧವಾಗಿದೆ.
ಸೈಕಲ್‌ನ ಹಿಂಬದಿ ಚಕ್ರವನ್ನು ಚೈನ್ ಮೂಲಕ ತಿರುಗಿಸುವ ಪ್ರೀವ್ಹೀಲ್ ಪಕ್ಕದಲ್ಲಿ ಇನ್ನೊಂದು ಪ್ರೀವ್ಹೀಲ್ ಜತೆಗೆ ಅದಕ್ಕೆ 12 ವೋಲ್ಟ್‌ನ ಡಿಸಿ ಮೋಟಾರ್ ಅಳವಡಿಸಲಾಗಿದೆ. ಮೋಟರಿನ ಸ್ವಿಚ್ ಬೈಕಿನ ಎಕ್ಸಿಲೇಟರ್ ಮಾದರಿ ಸೈಕಲ್‌ನ ಬಲಬದಿಯ ಹ್ಯಾಂಡಲ್‌ಗೆ ಜೋಡಿಸಲಾಗಿದೆ. ಜೊತೆಗೆ ಸೈಕಲ್‌ಗೆ ಹೆಡ್‌ಲೈಟ್ ಹಾಗೂ ಹಿಂಬದಿಯ ಲೈಟ್‌ನ ಸಹ ಅಳವಡಿಸಿದ್ದು, ರಾತ್ರಿ ವೇಳೆಯಲ್ಲೂ ಸೈಕಲ್‌ನ ಚಲಾಯಿಸುವಂತೆ ರೂಪಿಸಲಾಗಿದೆ.
ಬ್ಯಾಟರಿ ಚಾರ್ಜಿಂಗ್ ಮಾಡಲು ಸೈಕಲ್‌ನಲ್ಲಿ ಪ್ಲಗ್ವೊಂದನ್ನು ಇರಿಸಲಾಗಿದೆ. ಬ್ಯಾಟರಿಯನ್ನು ತೆಗೆಯದೇ ಸೈಕಲ್‌ನಲ್ಲಿಯೇ ಇರಿಸಿ ಚಾರ್ಜ್ ಮಾಡಬಹುದಾಗಿದೆ. ಸೈಕಲ್‌ನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಮೂರರಿಂದ ನಾಲ್ಕು ಗಂಟೆ ತಗಲುತ್ತೆ. ಒಮ್ಮೆ ಚಾರ್ಜ್ ಮಾಡಿದ್ಕೇ ಸುಮಾರು 25 ರಿಂದ 30 ಕಿಲೋ ಮೀಟರ್‌ವರೆಗೆ ಚಲಾಯಿಸಬಹುದು. ಸುಮಾರು 16 ರಿಂದ 18 ಸಾವಿರ ರೂ. ವೆಚ್ಚದಲ್ಲಿಯೇ ತಮ್ಮ ಸೈಕಲ್‌ಗಳನ್ನು ಬ್ಯಾಟರಿ ಚಾಲಿತವನ್ನಾಗಿ ಪರಿವರ್ತಿಸಿದ್ದಾರೆ.
ಮಕ್ಕಳು ಹೆಚ್ಚಿನ ಆಸಕ್ತಿವಹಿಸಿ ತಾವೇ ಬ್ಯಾಟರಿ ಚಾಲಿತ ಸೈಕಲ್‌ನ ಸಿದ್ಧಪಡಿಸಿರುವುದು ಅವರ ಪಾಲಕರಿಗೂ ಸಂತಸ ತರಿಸಿದೆ. ಕಡಿಮೆ ವೆಚ್ಚದಲ್ಲಿ ಸೈಕಲ್‌ನ ಮೋಟಾರು ಚಾಲಿತವನ್ನಾಗಿ ಪರಿವರ್ತಿಸಿರುವುದು ಮೆಚ್ಚಲೇಬೇಕು.