ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ ಸೋಮವಾರ ಬೆಂಗಳೂರು ರೈನೋಸ್ ತಂಡವು 63-33 ಅಂಕಗಳ ಅಂತರದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ತವರಿನ ಪ್ರೇಕ್ಷಕರ ಬೆಂಬಲಿಗರೊಂದಿಗೆ ಬೆಂಗಳೂರು ರೈನೋಸ್ ತಂಡವು ಪುಣೆ ಪ್ರೈಡ್ ವಿರುದ್ಧ ಮಂಗಳವಾರ ಕಾದಾಡಲಿದೆ. ಈ ಪಂದ್ಯಾವಳಿ ವೀಕ್ಷಣೆಗೆಂದು ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಆಗಮಿಸಲಿದ್ದು, ತವರಿನ ತಂಡವೂ ಗೆಲ್ಲುವ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಬಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿ ನಾಕ್ಔಟ್ವರೆಗೆ ಅಬ್ಬರದ ಆಟ ಪ್ರದರ್ಶಿಸಿದ ದಿಲರ್ ಡೆಲ್ಲಿ ತಂಡವನ್ನು ಮಣಿಸಿದ್ದು ಬೆಂಗಳೂರಿನ ಆತ್ಮ ಬಲವನ್ನು ಹೆಚ್ಚಿಸಿದೆ. ಬೆಂಗಳೂರು ರೈನೋಸ್ ಪರ ಮಿಂಚಿನ ರೈಡಿಂಗ್ ನಡೆಸಿದ ಸ್ಟಾರ್ ರೈಡರ್ ವಿಶಾಲ್ ಒಟ್ಟಾರೆ 24 ಅಂಕಗಳನ್ನು ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಹಾಗೂ ಅತ್ಯುತ್ತಮ ರೈಡರ್, ಪಂದ್ಯದ ಅತ್ಯುತ್ತಮ ಪ್ರೊಡಕ್ಟೀವ್ ರೈಡರ್ ಗೌರವಕ್ಕೆ ಪಾತ್ರರಾದರು.
ಆರುಮುಗಂ ರೈಡಿಂಗ್ನಿಂದ 13 ಅಂಕಗಳನ್ನು ಗಳಿಸುವುದರೊಂದಿಗೆ ಉತ್ತಮ ಸಾಥ್ ನೀಡಿದರು. ಮನೋಜ್ 6 ಅಂಕಗಳನ್ನು ಗಳಿಸುವುದರೊಂದಿಗೆ ಎದುರಾಳಿ ರೈಡರ್‌ಗಳಿಗೆ ಕಂಟಕವಾದರು.
ಲೀಗ್‌ನಲ್ಲಿ ಅಬ್ಬರಿಸಿ ನಾಕ್‌ಔಟ್ ಹಂತದಲ್ಲಿ ಎಡವಿದ ಡೆಲ್ಲಿ ತಂಡದ ಪರ ಅನುಭವಿ ರೈಡರ್ ಸುನಿಲ್ ಜೈಪಾಲ್ 14 ಅಂಕಗಳನ್ನು ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. ವಿಪುಲ್ ಮೋಕಲ್ (4) ಕೊಂಚ ಪ್ರತಿರೋಧವೊಡ್ಡಿ ಪಂದ್ಯದ ಅತ್ಯುತ್ತಮ ಡಿಫೆಂಡರ್ ಎನಿಸಿಕೊಂಡರು. ಬೆಂಗಳೂರು ರೈನೋಸ್ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ 35-15 ಅಂತರದಲ್ಲಿ ಭಾರಿ ಮುನ್ನಡೆ ಪಡೆದು, ಪಂದ್ಯದ ಸಂಪೂರ್ಣ ಹಿಡಿತವನ್ನು ತನ್ನದಾಗಿಸಿಕೊಂಡಿತ್ತು.
ಮೊದಲ ಕ್ವಾರ್ಟರ್‌ನಲ್ಲಿ 11-9 ಅಂಕಗಳೊಂದಿಗೆ ಕೇವಲ 2 ಅಂಕದ ಮುನ್ನಡೆಯಲ್ಲಿದ್ದ ಬೆಂಗಳೂರು ದ್ವಿತೀಯ ಕ್ವಾರ್ಟರ್‌ನಲ್ಲಿ 24-6 ಅಂಕಗಳಲ್ಲಿ ಡೆಲ್ಲಿ ಪಡೆಯ ಹೆಡೆಮುರಿ ಕಟ್ಟುವುದರ ಜತೆಗೆ ಅಮೋಘ ಜಯದೊಂದಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ.