ನವದೆಹಲಿ : ಆತ್ಮಹತ್ಯೆಗೆ ಯತ್ನಿಸಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಾಗಿದ್ದ ದೆಹಲಿಯ 'ಬಾಬಾ ಕಾ ಢಾಬಾ' ಉಪಾಹಾರ ಗೃಹದ ಮಾಲೀಕ ಕಾಂತಾ ಪ್ರಸಾದ್ ಅವರನ್ನು ಶುಕ್ರವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ದೆಹಲಿ ಪೊಲೀಸರಿಗೆ ಗುರುವಾರ ತಡವಾಗಿ ಫೋನ್ ಬಂದಿತ್ತು. "ಅವರಿಗೆ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ" ಎಂದು ಅವರ ಮಗ ಆಜಾದ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದರು.
ಕಳೆದ ವರ್ಷ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದ ಪ್ರಸಾದ್ ಅವರು ದೇಶಾದ್ಯಂತ ಅಪಾರ ದೇಣಿಗೆ ಪಡೆದ ನಂತರ ಮಾಲ್ವಿಯಾ ನಗರದಲ್ಲಿ ಹೊಸ ರೆಸ್ಟೋರೆಂಟ್ ತೆರೆದಿದ್ದರು. ಆದರೆ, ನಿರಂತರ ಲಾಕ್‌ಡೌನ್ ನಷ್ಟದಿಂದಾಗಿ 2020ರ ಡಿಸೆಂಬರ್‌ನಲ್ಲಿ ಹೊಸ ರೆಸ್ಟೋರೆಂಟ್ ಅನ್ನು ಮುಚ್ಚಲಾಗಿತ್ತು.