ಕಾರವಾರ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಐದು ವರ್ಷ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಮೈತ್ರಿ ಸರ್ಕಾರ ಎರಡು ಪಕ್ಷಕ್ಕೂ ಅನಿವಾರ್ಯವಾಗಿದೆ. ಸರ್ಕಾರ ಅಧಿಕಾರದಲ್ಲಿದ್ದು, ಒಳ್ಳೆಯ ಕೆಲಸ ಮಾಡುತ್ತಿದೆ. ಈ ಬಗ್ಗೆ ಯೋಚಿಸಿ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಮಾತನಾಡಬೇಕು ಎಂದು ಹೇಳಿದರು.
ಸರ್ಕಾರ ಬೀಳಿಸಲು ಹದಿನೇಳು ಜನ ರಾಜೀನಾಮೆ ಕೊಡಬೇಕು. ಆದರೆ ಅದು ಸಾಧ್ಯವಾಗದ ಮಾತು. ಇನ್ನು ಶಾಸಕರ ಖರೀದಿ ಮಾಡಲು ಮುಂದಾಗಿದ್ದ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಪ್ರಾರಂಭವಾಗಲಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ, ಪ್ರೀತಂ ಗೌಡ ಹಾಗೂ ಶಿವನಗೌಡ ನಾಯಕ ಅವರಿಗೆ ಕಂಟಕವಾಗಲಿದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ನನ್ನ ಸಹೋದರ ಇದ್ದಂತೆ. ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷವಾಗಿದ್ದು, ರಮೇಶ್ ಜಾರಕಿಹೊಳಿ ಅಲ್ಲೇ ಇರಬೇಕು. ಸರ್ಕಾರ ಜಾತ್ಯಾತೀತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನು ಜಾರಕಿಹೊಳಿ ಬೆಂಬಲಿಸಬೇಕು ಎಂದು ಹೇಳಿದರು.