ಮಂಗಳೂರು : ನಗರದ ಜಿಮ್ಮಿ ಸೂಪರ್ ಸ್ಟೋರ್ ಮಾಲೀಕ ಹಾಗೂ ಮತ್ತೋರ್ವನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ನರೇಂದ್ರ ನಾಯಕ್ ಅವರು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಸ್ಕ್ ಪ್ರಕರಣದ ಮಂಗಳೂರಿನ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹಾಗೂ ಸಾಮಾಜಿಕ ಕಾರ್ಯಕರ್ತ ನರೇಂದ್ರ ನಾಯಕ್ ಅವರನ್ನು ಆಡಿಯೋದಲ್ಲಿ ನಿಂದನೆ ಮಾಡಲಾಗಿತ್ತು. ಫೋನ್ ಕಾಲ್ ಆಡಿಯೋ ಇದಾಗಿದ್ದು, ಇಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿತ್ತು ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಮಾಸ್ಕ್ ಧರಿಸದೆ ಜಿಮ್ಮಿ ಸೂಪರ್ ಸ್ಟೋರ್ಗೆ ಹೋಗಿದ್ದರು. ಅಲ್ಲಿ ಶಾಪ್ ಸಿಬ್ಬಂದಿ ಮಾಸ್ಕ್ ಧರಿಸಲು ಹೇಳಿದ್ದು, ಇಲ್ಲದಿದ್ದರೆ ತಮ್ಮ ಶಾಪ್ಗೆ ಬರಬೇಡಿ ಎಂದು ಹೇಳಿದ್ದಾರೆ.
ಈ ಸಂದರ್ಭ ತಾನು ಮಾಸ್ಕ್ ಧರಿಸೋಲ್ಲ ಎಂದು ಇಬ್ಬರ ನಡುವೆಯೂ ಮಾತಿನ ಚಕಮಕಿಯಾಗಿತ್ತು. ಇದರ ಸಿಸಿಟಿವಿ ಫೂಟೇಜ್ ವೈರಲ್ ಆಗಿ ವೈದ್ಯರೊಬ್ಬರೇ ಮಾಸ್ಕ್ ಧರಿಸದೆ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಭಾರಿ ಪ್ರಚಾರವಾಗಿತ್ತು.
ಈ ಬಗ್ಗೆ ಸೂಪರ್ ಮಾರ್ಕೆಟ್ ಮಾಲೀಕರಿಗೆ ಅವರ ಪರಿಚಯದ ವ್ಯಕ್ತಿ ದೂರವಾಣಿ ಕರೆ ಮಾಡಿ ಈ ಬಗ್ಗೆ ಮಾತನಾಡುತ್ತಾ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆಡಿಯೊ ವೈರಲ್ ಆಗಿದ್ದು, ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.