ತುಮಕೂರು : ಮನೆಗೆಲಸ ಮಾಡುವ ಮಹಿಳೆಯರಿಗೆ ಆಹಾರ ಧಾನ್ಯಗಳ ಕೀಟಗಳನ್ನು ವಿತರಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಬಜೆಟ್‌ನಿಂದ ಹಣ ನೀಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ಕಾರ್ಮಿಕ ಸೇವಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿತು.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಇದರಿಂದ ಮನೆ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿರುವ ಮಹಿಳೆಯರು ಕಳೆದ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದೆ, ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಹಾಗಾಗಿ ಸರ್ಕಾರ ತನ್ನ ಬಜೆಟ್‌ನಲ್ಲಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹಣ ಒದಗಿಸಿ ಇತರೆ ಕಾರ್ಮಿಕರಿಗೆ ಕೋವಿಡ್-19 ಸಹಾಯಧನ ನೀಡಿದಂತೆ, ಮನೆಗೆಲಸದ ಮಹಿಳೆಯರಿಗೂ ಸಹಾಯಧನ ನೀಡಬೇಕು. ಮನೆಗೆಲಸಕ್ಕಾಗಿ ಬೇರೆ ಪ್ರದೇಶ, ಬಡಾವಣೆಗಳಿಗೆ ಹೋಗುವುದರಿಂದ ಅವರಿಗೆ ಬಸ್ ಸಂಚಾರದಲ್ಲಿ ರಿಯಾಯಿತಿ ದರ ನೀಡಬೇಕು ಎಂದು ಒತ್ತಾಯಿಸಿದರು.