ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೊಟ್ಟೆ ನೋವಿಗೆ ಪರಿಹಾರಕ್ಕಾಗಿ ಬಂದ ರೋಗಿಯೊಬ್ಬರನ್ನು ನಿರ್ಲಕ್ಷ್ಯ ತೋರಿ ಕೋಮಾಗೆ ಕಳಿಸಿದ್ದಲ್ಲದೇ ನಾಲ್ಕು ಕೋಟಿ ರೂಪಾಯಿ ಬಿಲ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೆಹಲಿ ಮೂಲದ ಪೂನಂ ರಾಣಾ ಹಾಗೂ ಕೇರಳ ಮೂಲದ ರೇಜಿಶ್ ನಾಯಕ್ ಬೆಂಗಳೂರಿಗೆ ಬಂದು ಖಾಸಗಿ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲೇ ಇಬ್ಬರೂ ಪರಸ್ಪರ ಪ್ರೀತಿಸಿ ನಂತರ ಮದುವೆ ಕೂಡ ಆಗಿದ್ದರು. ಮೂರು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ ಯುವ ಜೋಡಿ ಎಲ್ಲರಂತೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು.
ಆದರೆ, ಒಂದಿನ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೊಟ್ಟೆ ನೋವು ಪದೇ ಪದೇ ಮರುಕಳಿಸಿದಾಗ ಹಳೆ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ 2015ರ ಅ.3ರಂದು ಪೂನಂರನ್ನು ಪತಿ ರೇಜಿಶ್ ನಾಯಕ್ ಕರೆದುಕೊಂಡು ಹೋಗಿದ್ದರು. ಮಣಿಪಾಲ್ ಆಸ್ಪತ್ರೆಗೆ ಪೂನಂ ಬರುತ್ತಿದ್ದಂತೆ ಚೆಕ್ ಮಾಡಿದ್ದ ವೈದ್ಯರು ಹೊಟ್ಟೆ ನೋವಿಗೆ ಕಾರಣಗಳನ್ನು ಹೇಳಿದ್ದರು. ಆದರೆ, ಕೊನೆಗೆ ಮಲ ವಿಸರ್ಜನೆಯಲ್ಲಿ ಸಮಸ್ಯೆಯಿದೆ ಎಂದಿದ್ದರು.
ಈಗಾಗಲೇ ಮೂರುವರೆ ವರ್ಷಗಳೇ ಕಳೆದು ಹೋಗಿವೆ.ಈಗ ಆಪರೇಷನ್ ಮಾಡಬೇಕು 3.5 ಲಕ್ಷ ಪ್ಯಾಕೇಜ್ ಆಗುತ್ತದೆ ಎಂದು ಹೇಳಿದ್ದರು. ಹಣಕ್ಕಿಂತ ಹೆಂಡತಿ ಮುಖ್ಯ ಎಂದಿದ್ದ ರೇಜಿಶ್ ಆಪರೇಷನ್ ಮಾಡಿ ಎಂದು ವೈದ್ಯರಿಗೆ ಹೇಳಿದ್ದರು. ಆಪರೇಷನ್ ಆದ ಸ್ವಲ್ಪ ಗಂಟೆಗಳ ಕಾಲ ಆಕೆ ಚೆನ್ನಾಗಿಯೇ ಇದ್ದರು. ಆದರೆ, ಸಿಬ್ಬಂದಿ ಪೂನಂಗೆ ಹಾಕಿದ್ದ ಆಮ್ಲಜನಕ ನಿಂತಿರುವುದನ್ನು ನೋಡದೇ ಇದ್ದುದರಿಂದ ಅವರ ಮೆದುಳಿಗೆ ತೊಂದರೆಯಾಗಿ ಕೋಮಾಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪತಿ ಆರೋಪಿಸಿದ್ದಾರೆ.
ಅದಾದ ನಂತರ ಇಲ್ಲಿಯವರೆಗೂ ಮಣಿಪಾಲ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಕೋಮಾ ಸ್ಥಿತಿ ತಲುಪಿದ ನಂತರ ಚಿಕಿತ್ಸೆ ಮುಂದುವರೆಸಲಾಗಿತ್ತು. ಈ ವೇಳೆ ಸ್ವಲ್ಪ ಚೇತರಿಕೆ ಕಂಡಿದ್ದರು. ಆದರೆ, ಆ ವೇಳೆಗಾಗಲೇ ನಾನು 86 ಲಕ್ಷ ರೂ. ಬಿಲ್ ಪಾವತಿ ಮಾಡಿದ್ದೆ. ಈ ನಡುವೆ ಪೂನಂ ಆರೋಗ್ಯ ಚೇತರಿಕೆ ಕಾಣುತ್ತಲೇ ಇರಲಿಲ್ಲ. ದಿನ ದಿನಕ್ಕೆ ಕ್ಷೀಣಿಸುತ್ತಿತ್ತು. ಇಲ್ಲಿಯವರೆಗೂ ಪೂನಂ ಚಿಕಿತ್ಸೆ ಬಿಲ್ 4 ಕೋಟಿ ತಲುಪಿದೆ ಎಂದು ಪತಿ ದೂರಿದ್ದಾರೆ.
ವೈದ್ಯರ ನಿರ್ಲಕ್ಷ್ಯ ಕುರಿತು ಬೆಂಗಳೂರು ಕಮೀಷನರ್ ಟಿ.ಸುನೀಲ್ ಕುಮಾರ್ ಹಾಗೂ ಜೀವನ ಭೀಮಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ಈಗಲೂ ನ್ಯಾಯಕ್ಕಾಗಿ, ತನ್ನ ಹೆಂಡತಿ ಆರೋಗ್ಯ ಸುಧಾರಿಸಲಿ ಎಂದು ಪ್ರತಿನಿತ್ಯ ಊಟ ತಿಂಡಿ ಬಿಟ್ಟು ರೇಜಿಶ್ ಅಲೆಯುತ್ತಿದ್ದಾರೆ. ಮತ್ತೊಂದೆಡೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೂನಂ ಭೇಟಿ ಮಾಡಲು ಸಹ ಅವಕಾಶ ಕೊಡದೇ ಆಕೆಯನ್ನು ಜೀವಂತ ಶವವಾಗಿ ಮಾಡಿ ಬಿಟ್ಟಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.