ಬೆಂಗಳೂರು: ಕನ್ನಡ ಸಂಸ್ಕೃತಿಗೆ ಸಂಬಂಧ ಪಟ್ಟ ನಾನಾ ಕ್ಷೇತ್ರಗಳ ಆಯಾ ಜಿಲ್ಲೆಗಳ, ವಿಧಾನ ಸಭಾ ಕ್ಷೇತ್ರವಾರು ಕಲಾ ಪ್ರಕಾರಗಳಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ ಕರ್ನಾಟಕ ಸಂಸ್ಕೃತಿ ಎಂಬ ನೂತನ ಕಾರ್ಯಕ್ರಮ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಚೈತನ್ಯ ನೀಡಬೇಕಿದೆ.ಇಲಾಖೆ ಹಳೆಯ ಸಂಪ್ರದಾಯದಲ್ಲೇ ನಡೆದು ಬರುತ್ತಿದೆ, ಇದಕ್ಕೆ ಹೊಸ ರೂಪ ಕೊಡಲು ನಿರ್ಧರಿಸಿದ್ದೇನೆ. ಸಂಘ ಸಂಸ್ಥೆಗಳು ಕಾರ್ಯಕ್ರಮ ಆಯೋಜನೆಗಾಗಿ ಪದೇ ಪದೆ ಅರ್ಜಿ ಹಾಕುತ್ತಿದ್ದರು, ಕಾರ್ಯಕ್ರಮ ನಡೆಯದಿದ್ದರೂ ಹಣ ಖರ್ಚು ಮಾಡುತ್ತಿದ್ದರು.
ಈ ಬಗ್ಗೆ ಹಲವು ತನಿಖಾ ಸಂಸ್ಥೆಗಳಲ್ಲಿ ದೂರು ದಾಖಲಾಗಿವೆ. ಹೀಗಾಗಿ ಈ ವ್ಯವಸ್ಥೆಯನ್ನು ಆನ್ ಲೈನ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಸುಮಾರು 1300 ಕ್ಕೂ ಹೆಚ್ಚು ಸಂಸ್ಥೆಗೆ ಹಣ ಬಿಡುಗಡೆಯಾಗಿದೆ, ಸದ್ಯ ಹಣ ಬಿಡುಗಡೆಗೆ ತಡೆ ನೀಡಿದ್ದೇನೆ. ದಾಖಲೆಗಳಿಲ್ಲದೆ ಹಣ ಲಪಟಾಯಿಸಿದ್ದಾರೆ, ಕೆಲ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ, ಹಣ ದುರುಪಯೋಗದ ಬಗ್ಗೆ ಸಮಿತಿ ರಚನೆ ಮಾಡಲಾಗಿದ್ದು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೊಣೆ ನೀಡಲಾಗಿದೆ.
ಹೊಸ ನಿರ್ಧಾರಕ್ಕೆ ಎಷ್ಟೇ ವಿರೋಧ ಎದುರಾಗಲಿ ಎದುರಿಸೋಕೆ ನಾನು ಸಿದ್ಧನಿದ್ದೇನೆ. ಅಕ್ರಮವಾಗಿ ಹಣ ಎಗರಿಸೋಕೆ ನಾನು ಬಿಡುವುದಿಲ್ಲ. ಒಂದೇ ಹೆಸರಲ್ಲಿ ಮೂರು ಬಾರಿ ಹಣ ಹೊಡೆದಿವೆ. ಇದೆಲ್ಲದರ ಮೇಲೂ ನಾವು ಗಮನಹರಿಸಿದ್ದೇವೆ ಎಂದು ತಿಳಿಸಿದರು.
ಜಯಚಾಮರಾಜೇಂದ್ರ ಒಡೆಯರ್ ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ. ಮೈಸೂರು, ಬೆಂಗಳೂರಿನಲ್ಲಿ ನಡೆಸುತ್ತೇವೆ, ಸಿಎಂ ಜೊತೆ ಚರ್ಚಿಸಿ ದಿನಾಂಕ ನಿಗದಿ ಮಾಡಲಿದ್ದು, ಬೃಹತ್ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.