ಬೆಂಗಳೂರು: ನಗರದಲ್ಲಿ ಇಂದು ಬೆಳಗ್ಗೆ ಸರ್ಕಾರಿ ಇಂಜಿನಿಯರ್ಗಳಿಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಏಕಕಾಲಕ್ಕೆ ನಗರದ ಹಲವೆಡೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಡಿಎ, ಬಿಬಿಎಂಪಿ ನೀಡುವ ಟಿಡಿಆರ್ ಹಕ್ಕು ಪತ್ರದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಆರೋಪದ ಮೇಲೆ ಎಸಿಬಿ ಎಸ್ಪಿ ಸಂಜೀವ್ ಪಾಟೀಲ್ ಮತ್ತು ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ಏಕಕಾಲಕ್ಕೆ ಆರು ಕಡೆ ದಾಳಿ ನಡೆಸಲಾಗಿದೆ. ಬಿಡಿಎ ಅಧಿಕಾರಿ ಕೃಷ್ಣಾಲಾಲ್ರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದ್ದು, ಬಿಡಿಎ ನಿಯಮಾವಳಿಗಳನ್ನು ಗಾಳಿಗೆ ತೂರಿ ಅವ್ಯವಹಾರ ನಡೆಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಬಿಡಿಎಗೆ ಇತ್ತೀಚೆಗೆ ವರ್ಗಾವಣೆಗೊಂಡಿದ್ದ ಕೃಷ್ಣಲಾಲ್, ಬಿಲ್ಡರ್ ನಿತೇಶ್ ಜೊತೆ ಸೇರಿ ಅವ್ಯವಹಾರ ನಡೆಸಿ, ಸುಮಾರು ಐದು ಸಾವಿರ ಕೋಟಿ ಅವ್ಯವಹಾರ ಮಾಡಿದ್ದಾರೆ ಎನ್ನಲಾಗ್ತಿದೆ. ನಿತೇಶ್ಗೆ ಮಾತ್ರವಲ್ಲದೆ ಹಲವರಿಗೆ ನೂರಾರು ಕೋಟಿ ಟಿಡಿಆರ್ ಕಾನೂನು ಮೀರಿ ಮಂಜೂರು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಇನ್ನು ಜಕ್ಕೂರಿನ ಲೇಔಟ್ನಲ್ಲಿರುವ ಕೃಷ್ಣಲಾಲ್ ಅವರ ಏಜೆಂಟ್ನ ನಿವಾಸದ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ಮುಂದುವರೆದಿದ್ದು, ಇನ್ನೂ ಹಲವು ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.