ಬೆಂಗಳೂರು : ಕೊರೊನಾ ಎರಡನೇ ಅಲೆಯ ಮಹಾ ದುರಂತ ರಾಷ್ಟ್ರವನ್ನು ಅಪ್ಪಳಿಸುತ್ತಿರುವ ಈ ಸಮಯದಲ್ಲಿ, ಜನಸಾಮಾನ್ಯರಿಗೆ ಬೆಡ್ಗಳು, ಆ್ಯಂಬುಲೆನ್ಸ್, ಐಸಿಯು, ವೆಂಟಿಲೇಟರ್, ಆಕ್ಸಿಜನ್ಗಳು ಸಮಯಕ್ಕೆ ಸಿಗದೆ ಪ್ರತಿ ದಿವಸ ನೂರಾರು ಸರ್ಕಾರಿ ಪ್ರಾಯೋಜಿತ ಕಗ್ಗೊಲೆಗಳಾಗುತ್ತಿರುವುದು ಕಟು ವಾಸ್ತವ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ. ಟಿ ನಾಗಣ್ಣ ತಿಳಿಸಿದರು.
ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಹಲವಾರು ವೈಫಲ್ಯಗಳ ನಂತರ ಎರಡನೇ ಅಲೆಯಲ್ಲಿಯೂ ಸಹ ಪೂರ್ವಯೋಜಿತವಾಗಿ ಸರ್ಕಾರ ಏನನ್ನೂ ಸಿದ್ಧಪಡಿಸಿಕೊಂಡಿಲ್ಲ. ಸಂಪೂರ್ಣ ವೈಫಲ್ಯತೆಯಿಂದ ಪರಿಸ್ಥಿತಿ ಎದುರಿಸುತ್ತಿರುವ ಪರಿಣಾಮವಾಗಿ ರಾಜ್ಯದಲ್ಲಿ ಸಾವಿರಾರು ಮಂದಿ ಈಗಾಗಲೇ ಸಾವನ್ನಪ್ಪುತ್ತಿದ್ದಾರೆ ಎಂದು ನಾಗಣ್ಣ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಸರ್ಕಾರದ ಇಷ್ಟೆಲ್ಲ ವೈಫಲ್ಯಗಳಿದ್ದರೂ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಇತ್ತ ಕಡೆ ಗಮನಹರಿಸಿ ಸಮರೋಪಾದಿಯಲ್ಲಿ ವೈಫಲ್ಯಗಳನ್ನು ಸರಿಪಡಿಸುವುದನ್ನು ಬಿಟ್ಟು ಬೆಡ್ ಬ್ಲಾಕಿಂಗ್ ಎಂಬ ದಂಧೆಯನ್ನು ಬಯಲಿಗೆಳೆದಿದ್ದೇನೆ ಎಂಬಂತೆ ಮಾಧ್ಯಮಗಳ ಮುಂದೆ ಫೋಸ್ ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದರು.
ತಮ್ಮ ಬಿಜೆಪಿ ಸರ್ಕಾರದ ಮಂತ್ರಿ ಮಹೋದಯರೇ ಈ ದಂಧೆಯಲ್ಲಿ ಅವ್ಯಾಹತವಾಗಿ ನಿರತರಾಗಿದ್ದರೂ ಯಾವುದೋ ಸಣ್ಣ ಸಣ್ಣ ಮೀನುಗಳನ್ನು ಹಿಡಿದು ಬೃಹತ್ ತಿಮಿಂಗಿಲಗಳನ್ನು ಹಿಡಿಯಲಾರದೇ ಕೈಚೆಲ್ಲಿ ಕುಳಿತಿದ್ದಾರೆ.
ರಾಜ್ಯದಲ್ಲಿ ಇಂದು ರೆಮ್ಡೆಸಿವಿರ್ ಔಷಧ, ಆಕ್ಸಿಜನ್ ಸಿಲಿಂಡರ್‌ಗಳು ಕಾಳಸಂತೆಯಲ್ಲಿ ಅವ್ಯಾಹತವಾಗಿ ಮಾರಾಟವಾಗುತ್ತಿವೆ. ಇವೆಲ್ಲವುಗಳನ್ನು ಮೂಲೋಚ್ಛಾಟನೆ ಮಾಡುವುದು ಬಿಟ್ಟು ಏಕಾಏಕಿ ಯಾವುದೇ ಪಾಲಿಕೆ ಕಾಲ್ ಸೆಂಟರ್‌ಗೆ ನುಗ್ಗಿ ಪೌರುಷವನ್ನು ಪ್ರದರ್ಶಿಸುವುದು ಹೇಡಿತನದ ಲಕ್ಷಣ ಎಂದು ನಾಗಣ್ಣ ಆಕ್ರೋಶ ಹೊರ ಹಾಕಿದರು.
ಸಂಸದರಿಗೆ ನಿಜಕ್ಕೂ ಬೆಂಗಳೂರಿಗರ ಪ್ರಾಣದ ಮೇಲೆ ಕಿಂಚಿತ್ತಾದರೂ ಕಾಳಜಿ - ಕಳವಳ ಹಾಗೂ ತಾಕತ್ತು ಇದ್ದರೆ ಈ ಕೂಡಲೇ 28 ಮಂದಿ ರಾಜ್ಯದ ಸಂಸತ್ ಸದಸ್ಯರುಗಳನ್ನು ಸೇರಿಸಿಕೊಂಡು ಪ್ರಧಾನಮಂತ್ರಿಗಳ ಮೇಲೆ ತೀವ್ರ ಒತ್ತಡ ಹೇರುವ ಮೂಲಕ ಈ ತಕ್ಷಣದಿಂದಲೇ ರಾಜ್ಯಕ್ಕೆ ಬೇಕಾಗುವಷ್ಟು ವೈದ್ಯಕೀಯ ಆಮ್ಲಜನಕಗಳನ್ನು ತಂದು ರಾಜ್ಯದ ಜನತೆಯ ಪ್ರಾಣ ಉಳಿಸಬೇಕೆಂದು ಆಗ್ರಹಿಸಿದರು.