ನೆಲಮಂಗಲ: ಜಮೀನು ವಿಚಾರಕ್ಕೆ ಲೇಔಟ್ನಲ್ಲಿ ವಾಕಿಂಗ್ ಮಾಡುತ್ತಿದ್ದ ವೃದ್ಧನನ್ನ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಮಾದನಾಯಕನಹಳ್ಳಿ ಪೊಲೀಸರು 7 ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆಯಲ್ಲಿ ವೃದ್ಧನ ಕೊಲೆಯಾಗಿತ್ತು. ಏಪ್ರಿಲ್ 22 ರ ಬೆಳಗ್ಗೆ 8:30 ಸಮಯದಲ್ಲಿ ಮನೆ ಮುಂದಿನ ಲೇಔಟ್ನಲ್ಲಿ ಸಿದ್ದಗಂಗಪ್ಪ ವಾಕಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಬಂದಿದ್ದ ಆರೋಪಿಗಳು ಕತ್ತನ್ನು ಸೀಳಿ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ಎನ್, ರವಿಕುಮಾರ್ ವಿ, ಮಹೇಶ್ ಎಂ, ಲೋಕೇಶ್ ಹೆಚ್.ಎಸ್, ಲಕ್ಷಣ್ ಗೌಡ, ಮನೋಜ್ ಜಿ.ಎಂ, ಆನಂದ್ ಸೇರಿದಂತೆ 7 ಜನ ಆರೋಪಿಗಳನ್ನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ಕೊಲೆಯಾದ ಸಿದ್ದಗಂಗಪ್ಪರವರ ಕಡಬಗೆರೆ ಸರ್ವೆ 24/1 ರ ಜಮೀನನನ್ನು ಬಡಾವಣೆ ಮಾಡುವ ಕಾರಣಕ್ಕೆ ಬೆಂಗಳೂರು ಮೂಲದ ಪಾಪಣ್ಣ ಹಾಗೂ ಉಮೇಶ್ ಎಂಬುವರು ಅಭಿವೃದ್ದಿಪಡಿಸಿ ಸೈಟ್ ಮಾರಾಟ ಮಾಡಲು ಅಗ್ರಿಮೆಂಟ್ ಹಾಕಿಸಿಕೊಂಡಿದ್ರಂತೆ. ಆದ್ರೆ 3-4 ವರ್ಷ ಕಳೆದರೂ ಬಡಾವಣೆ ಅಭಿವೃದ್ದಿಪಡಿಸಿದ ಸಿದ್ದಗಂಗಪ್ಪನವರ ಜಮೀನಿನ 15 ಕುಂಟೆ ಜಾಗವನ್ನು ಹಣ ನೀಡದೇ ಮತ್ತೊಬ್ಬರಿಗೆ ರಿಜಿಸ್ಟರ್ ಮಾಡಿದ್ದರು.
ಪಾಪಣ್ಣ ಮತ್ತು ಉಮೇಶ್, ಇದಕ್ಕೆ ಸಂಬಂಧಿಸಿದಂತೆ ಸಿದ್ದಗಂಗಪ್ಪ ತನ್ನ ಜಮೀನು ಒತ್ತುವರಿ ಮಾಡಿದ್ದಾರೆಂದು ನೆಲಮಂಗಲದ ಜೆಎಂಎಫ್‌ಸಿ ನ್ಯಾಯಾಲಯದ ಮೆಟ್ಟಿಲೇರಿದ್ರು. ಆದ್ರೆ ಸೂಕ್ತ ದಾಖಲಾತಿ ಒದಗಿಸದ ಕಾರಣ ಕೇಸ್ ಖುಲಾಸೆಗೊಂಡಿದೆ. ಈ ಸಂಬಂಧ ಸಿದ್ದಗಂಗಪ್ಪ ನ್ಯಾಯಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಫೈಲ್ ಮಾಡಿದ್ದರು. ಈ ವಿಚಾರಕ್ಕೆ ಪಾಪಣ್ಣ, ಉಮೇಶ್ ಹಾಗೂ ಕೊಲೆಯಾದ ಸಿದ್ದಗಂಗಪ್ಪ ನಡುವೆ ಆಗ್ಗಾಗ್ಗೆ ಜಗಳ ನಡೆಯುತ್ತಿತ್ತು. ಏಪ್ರಿಲ್ 22 ರಂದು ಸಿದ್ದಗಂಗಪ್ಪ ಮುಂಜಾನೆ ಎದ್ದು ತಮ್ಮ ಮನೆ ಬಳಿಯ ಬಡಾವಣೆಯಲ್ಲಿ ವಾಕ್ ಮಾಡುತ್ತಿದ್ದ ಸಂದರ್ಭ ಆರೋಪಿಗಳು ಹಿಂಬದಿಯಿಂದ ಅಟ್ಯಾಕ್ ಮಾಡಿ ಕುತ್ತಿಗೆ ಸೀಳಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡು ನರಳುತ್ತಿದ್ದ ಸಿದ್ದಗಂಗಪ್ಪ ಕುಸಿದು ಕೆಳಗೆ ಬೀಳುತ್ತಿದ್ದಾನೆ. ಈ ದೃಶ್ಯ ಕಂಡ ಮಡದಿ ಮತ್ತವರ ಮಗ, ಗಾಯಾಳು ಸಿದ್ದಗಂಗಪ್ಪನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ, ಆದರೆ ಮಾರ್ಗಮಧ್ಯೆ ಮೃತಪಟ್ಟಿದ್ದರು. ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.