ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಜಿಲ್ಲಾಡಳಿತ ಸೇರಿದಂತೆ ಸಂಘ - ಸಂಸ್ಥೆಗಳು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿವೆ.
ಕೊರೊನಾ ತಡೆಗಟ್ಟುವಲ್ಲಿ ಸದ್ಯ ಪ್ರಮುಖವಾಗಿ ಮುಂಜಾಗ್ರತೆ ಎಂದರೆ ಮಾಸ್ಕ್ ಧರಿಸುವುದು. ಮಾಸ್ಕ್ ಕುರಿತಂತೆ ಎಷ್ಟು ಜಾಗೃತಿ ಮೂಡಿಸಿದರೂ ಕೆಲವು ಜನ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದಾರೆ. ಇಂತಹರಿಗೆ ಮಾಸ್ಕ್ ಕುರಿತ ಜಾಗೃತಿ ಮೂಡಿಸುತ್ತಿದ್ದಾರೆ ಹಾವೇರಿಯ ಶಿವರಾಜ್ ಮರ್ತೂರು.
ಶಿವರಾಜ್ ಮರ್ತೂರು ಮೂಲತಃ ಕ್ರೀಡಾಪಟು. ಕೊರೊನಾ ತಡೆಯಲು ಮಾಸ್ಕ್ ಪ್ರಮುಖ ಪಾತ್ರವಹಿಸುತ್ತೆ ಎಂಬುವುದನ್ನ ತಿಳಿದ ಶಿವರಾಜ್ ದಿನನಿತ್ಯ ನೂರಾರು ಮಾಸ್ಕ್‌ಗಳನ್ನು ಜನರಿಗೆ ವಿತರಿಸುತ್ತಾರೆ. ಹಾವೇರಿ ನಗರದ ಪ್ರಮುಖ ವೃತ್ತಗಳಿಗೆ ತೆರಳುವ ಇವರು ಮಾಸ್ಕ್ ಇಲ್ಲದವರಿಗೆ ಮಾಸ್ಕ್ ನೀಡುತ್ತಾರೆ. ಮಾಸ್ಕ್ ಏಕೆ ಹಾಕಬೇಕು ಹೇಗೆ ಹಾಕಬೇಕು ಸೇರಿದಂತೆ ವಿವಿಧ ಮಾಹಿತಿ ತಿಳಿಸುತ್ತಾರೆ. ಮಾಸ್ಕ್ ಹಾಕುವುದರಿಂದ ಆಗುವ ಪ್ರಯೋಜನಗಳ ಕುರಿತಂತೆ ಶಿವರಾಜ್ ಜನರಿಗೆ ಅರಿವು ಮೂಡಿಸುತ್ತಾರೆ.
ಜೊತೆಗೆ ಪೌರ ಕಾರ್ಮಿಕರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಸಹ ಶಿವರಾಜ್ ಬಿಸ್ಕಿಟ್ ಮತ್ತು ನೀರು ಪೂರೈಸುತ್ತಾರೆ. ನಗರದಲ್ಲಿ ಕೊರೊನಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುವ ನೌಕರರೆಂದರೆ ಅವರು ಪೌರ ಕಾರ್ಮಿಕರು ಮತ್ತು ಪೊಲೀಸರು ಅವರಿಗಾಗಿ ತಾವು ಅಳಿಲು ಸೇವೆ ಸಲ್ಲಿಸುತ್ತಿರುವುದಾಗಿ ಶಿವರಾಜ್ ತಿಳಿಸುತ್ತಾರೆ.