ಬೆಂಗಳೂರು : ಕಳೆದ ಬಾರಿ ದಾಖಲೆ ಪ್ರಮಾಣದ ಆಹಾರೋತ್ಪನ್ನ ಉತ್ಪಾದನೆಯಾಗಿದೆ. ಈ ಬಾರಿಯೂ ಉತ್ತಮ ಮಳೆಯ ಜೊತೆ ಬೆಳೆಯ ನಿರೀಕ್ಷೆ ಇದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎಂ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಸಹಕಾರ ಇಲಾಖೆ ಎಪಿಎಂಸಿ ಇಲಾಖೆಗೆ ಸಂಬಂಧಪಟ್ಟಂತೆ ಸಭೆ ನಡೆಸಿ ಮುಂಗಾರು ಬಿತ್ತನೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚರ್ಚೆ ನಡೆಸಿದ್ದಾರೆ.
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಆರೆಂಟು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಕಡೆ ಉತ್ತಮವಾಗಿ ಮಳೆಯಾಗುವ ನಿರೀಕ್ಷೆ ಇದೆ. 1.5 ಲಕ್ಷ ಟನ್ ಕಳೆದ ಬಾರಿ ಆಹಾರ ಉತ್ಪಾದನೆ ಆಗಿತ್ತು.
ಈ ಬಾರಿಯೂ ಉತ್ತಮವಾದ ರೀತಿ ಆಹಾರ ಬೆಳೆಗಳನ್ನು ಬೆಳೆಯುವ ನಿರೀಕ್ಷೆ ಇದೆ. ಬಿತ್ತನೆ ಬೀಜ, ಗೊಬ್ಬರ, ಔಷಧಿಗಳ ದಾಸ್ತಾನು ಮತ್ತು ವಿತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಸಂಪೂರ್ಣ ವಿವರವನ್ನು ಪಡೆದುಕೊಂಡಿದ್ದಾರೆ ಎಂದರು.
ಲಾಕ್ಡೌನ್ನಿಂದಾಗಿ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗಿಲ್ಲ. ಬೆಳಗ್ಗೆ 6-10ರವರೆಗೆ ಬಿತ್ತನೆ ಬೀಜ ಹಾಗೂ ಗೊಬ್ಬರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈಲುಗಳ ರೇಕ್ನಿಂದ ಬರುವ ದಾಸ್ತಾನನ್ನು ಲೋಡಿಂಗ್-ಅನ್ಲೋಡಿಂಗ್ ಮಾಡಿ ಸರಬರಾಜು ಮಾಡಲು ಅನುಕೂಲ ಮಾಡಿಕೊಡಲಾಗಿದೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ, ರೈತರ ಕೆಲಸಗಳು ನಡೆಯುತ್ತಿವೆ ಎಂದರು.
ಲಾಕ್ಡೌನ್ ಒಂದು ವಾರ ವಿಸ್ತರಣೆ ಆಗಬೇಕು : ಸದ್ಯ ಜೂನ್ 7ರವರೆಗೆ ರಾಜ್ಯದಲ್ಲಿ ಲಾಕ್ಡೌನ್ ಇರಲಿದೆ. ಇನ್ನೊಂದು ವಾರ ವಿಸ್ತರಣೆ ಮಾಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಸೋಂಕು ಕಡಿಮೆಯಾಗಿಲ್ಲ. ಮರಣದ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ, ಕೊರೊನಾ ನಿಯಂತ್ರಣಕ್ಕಾಗಿ ಮತ್ತೊಂದು ವಾರ ಲಾಕ್ಡೌನ್ ವಿಸ್ತರಣೆ ಮಾಡಬೇಕು. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಒಳ್ಳೆಯದಾಗಲಿದೆ ಎಂದರು.
ಎರಡನೇ ಪ್ಯಾಕೇಜ್ ಯಾವಾಗ ಘೋಷಣೆ ಮಾಡಬೇಕು ಎನ್ನುವುದನ್ನು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಈ ಸಂಬಂಧ ಸಿಎಂ ಎಲ್ಲರ ಸಲಹೆ ಪಡೆದುಕೊಂಡಿದ್ದಾರೆ. ಅವರೇ ದಿನಾಂಕ ಘೋಷಣೆ ಮಾಡಲಿದ್ದಾರೆ ಎಂದು ಬಿ.ಸಿ ಪಾಟೀಲ್ ಮಾಹಿತಿ ನೀಡಿದರು.
ರೈತರ ಸ್ಥಿತಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಬಿ.ಸಿ ಪಾಟೀಲ್, ಕೊರೊನಾ ಸಾಂಕ್ರಾಮಿಕ ಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಗಳು ಹೆಕ್ಟೇರ್ಗೆ 10 ಸಾವಿರ ರೂ.ಗಳ ಪರಿಹಾರವನ್ನು ಹೂವಿನ ಬೆಳೆಗಾರರಿಗೆ ಕೊಡುತ್ತಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ರೈತರಿಗೆ ನಾವು ಘೋಷಣೆ ಮಾಡಿರುವುದನ್ನು ತಕ್ಷಣ ತಲುಪಿಸಬೇಕು, ವಿಳಂಬ ಮಾಡಬಾರದು ಎಂದು ಮುಖ್ಯಮಂತ್ರಿಗಳು ಆದೇಶ ಕೊಟ್ಟಿದ್ದಾರೆ ಎಂದರು.
ಉತ್ತರ ಕರ್ನಾಟಕದಲ್ಲಿ ಕವಾಸಮಿ ರೂಪದ ಮತ್ತೊಂದು ರೋಗದ ಬಗ್ಗೆ ಮಾಹಿತಿ ಇಲ್ಲ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಬ್ಲಾಕ್ ಫಂಗಸ್ ಇರುವುದು ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳು, ವೈದ್ಯಾಧಿಕಾರಿಗಳ ಜೊತೆ ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇವೆ ಎಂದರು.