ಮಂಗಳೂರು: ಮಂಗಳೂರಿನಿಂದ ದೆಹಲಿಯ ಡೆಹರಾಡೂನ್ಗೆ ಕಳುಹಿಸಲಾಗಿದ್ದ ಕಾರನ್ನು ಡೆಲಿವರಿ ಮಾಡದ ಕಾರಣ ಮಂಗಳೂರು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಕೇಶ್ ಎಂಬವರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸದಲ್ಲಿದ್ದು, ಇತ್ತೀಚೆಗೆ ದೆಹಲಿಗೆ ವರ್ಗಾವಣೆಗೊಂಡಿದ್ದರು. ಆ ಹಿನ್ನೆಲೆ ರಾಕೇಶ್ ಅವರು ಬಳಸುತ್ತಿದ್ದ ಕಾರನ್ನು ಅವರ ತಾಯಿ ದೆಹಲಿಯ ಡೆಹರಾಡೂನ್ಗೆ ಪ್ರೊಫೆಷನಲ್ ಪ್ಯಾಕರ್ಸ್ ಮತ್ತು ಕಾರ್ಗೋ ಮೂವರ್ಸ್ ಸಂಸ್ಥೆಯ ಮೂಲಕ ಕಳುಹಿಸಿಕೊಟ್ಟಿದ್ದರು.
ಕಾರನ್ನು ಜೂನ್ 14ರಂದು ದೆಹಲಿಗೆ ತಲುಪಿಸಿ ರಾಕೇಶ್ ಅವರಿಗೆ ಡೆಲಿವರಿ ನೀಡಬೇಕಿತ್ತು. ಫೋನ್ ಮೂಲಕ ಸಂಪರ್ಕಿಸಿದಾಗ ಕಾರನ್ನು ಇವತ್ತು ಡೆಲಿವರಿ ಕೊಡುತ್ತೇನೆ ನಾಳೆ ಡೆಲಿವರಿ ಕೊಡುತ್ತೇನೆ ಎಂದು ಹೇಳುತ್ತಿದ್ದರಷ್ಟೇ ಹೊರತು ಕಾರ್ ಡೆಲಿವರಿ ಮಾಡುತ್ತಿರಲಿಲ್ಲ.
ಈ ಹಿನ್ನೆಲೆ ರಾಕೇಶ್ ಅವರ ತಾಯಿ ರೇಖಾ ರಾವ್ ಅವರು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.