ಸೇಡಂ: ಕೆಲ ದಿನಗಳಿಂದ ಕೊರೊನಾ ಪ್ರಕರಣಗಳಿಲ್ಲದೇ ನಿರಾಳವಾಗಿದ್ದ ಸೇಡಂನಲ್ಲಿ ಮತ್ತೆ ನಾಲ್ಕು ಜನರಲ್ಲಿ ಸೋಂಕು ದೃಢವಾಗಿದ್ದು, ಆತಂಕ ಮರುಕಳಿಸಿದೆ.
ಬುರುಗಪಲ್ಲಿ ಗ್ರಾಮದ ಒಂದೇ ಕುಟುಂಬದ ಮೂವರಲ್ಲಿ ಹಾಗೂ ಕೋನಾಪುರ ಗ್ರಾಮದ ಓರ್ವನಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ತಾಲೂಕಿನ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದ್ದು, ಓರ್ವ ಬಾಲಕ ಗುಣಮುಖನಾಗಿದ್ದಾನೆ.
ಬುರುಗಪಲ್ಲಿ ಗ್ರಾಮದ 45, 20 ವರ್ಷದ ಪುರುಷರು ಮತ್ತು 39 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಇವರೆಲ್ಲರೂ ಬುರುಗಪಲ್ಲಿ ಕ್ವಾರಂಟೈನ್ ಸೆಂಟರ್ನಲ್ಲಿದ್ದರು. ಇನ್ನು ಕೋನಾಪುರದ 27 ವರ್ಷದ ಯುವತಿ ಸೇಡಂನ ಅಂಬೇಡ್ಕರ್ ವಸತಿ ನಿಲಯದಲ್ಲಿದ್ದಳು ಎಂದು ತಿಳಿದು ಬಂದಿದೆ.
ಬಾರದ ವರದಿ ಆತಂಕದಲ್ಲಿ ಜನ
ಪಟ್ಟಣಕ್ಕೆ ಪ್ರವೇಶಿಸಿದ್ದ ಕೊರೊನಾ ಮೊದಲಿಗೆ ಕಾಣಿಸಿಕೊಂಡಿದ್ದು, ಪಟ್ಟಣದ ರೆಹಮತನಗರ ಬಡಾವಣೆಯ 7 ವರ್ಷದ ಬಾಲಕನಲ್ಲಿ. ಅಂದಿನಿಂದ ಬಡಾವಣೆಯನ್ನು ಸೀಲಡೌನ್ ಮಾಡಲಾಗಿದೆ. ಬಾಲಕ ಈಗ ಗುಣಮುಖನಾಗಿ ಮನೆಗೆ ಹಿಂದಿರುಗಿದ್ದಾನೆ.
ಆದರೆ, ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 16 ಜನರ ವರದಿ 14 ದಿನ ಪೂರ್ಣಗೊಳ್ಳುತ್ತಿದ್ದರೂ ಸಹ ಇನ್ನೂ ಬಂದಿಲ್ಲ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.