ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರನ್ನೇ ಮೂಲೆಗುಂಪು ಮಾಡಿ, ಕೋವಿಡ್ ನಿರ್ವಹಣೆಗೆ ಎಂದು 5 ಜನ ಕೋವಿಡ್ ಉಸ್ತುವಾರಿ ಸಚಿವರನ್ನು ಸಿಎಂ ನೇಮಕ ಮಾಡಿದ್ದಾರೆ. ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಸರ್ಕಾರ ಉಚಿತವಾಗಿ ನೀಡಬೇಕಿದ್ದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ 1200 ರೂ. ಕೊಟ್ಟು ಹಾಕಿಸಿಕೊಳ್ಳಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ದಲ್ಲಾಳಿಯಾಗಿದ್ದಾರೆ. ಈ ಎಲ್ಲಾ ಆರೋಪಗಳನ್ನು ಎದುರಿಸಲು ಅಲ್ಲದೆ ಹೋದರೂ ಕಡೆ ಪಕ್ಷ ನಮ್ಮ ಸಲಹೆಗಳನ್ನು ಸ್ವೀಕರಿಸಲು ಆದರೂ ಸರ್ವಪಕ್ಷ ಸಭೆ ಕರೆಯಬೇಕೆಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಹೇಳಿದರು.
ಸಾಮಾಜಿಕ ಜಾಲತಾಣದ ಮೂಲಕ ವಾಗ್ದಾಳಿ ನಡೆಸಿರುವ ನಾರಾಯಣಸ್ವಾಮಿ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಕೋವಿಡ್ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ. ಎಷ್ಟೋ ರೋಗಿಗಳು ಆಕ್ಸಿಜನ್ ಬೆಡ್ ಇಲ್ಲದೆ, ವೆಂಟಿಲೇಟರ್ ಇಲ್ಲದೆ, ರೆಮ್ಡೆಸಿವಿರ್ ಇಲ್ಲದೆ ಹೀಗೆ ಸರಿಯಾದ ಚಿಕೆತ್ಸೆ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ 25 ಜನ ಸಂಸದರಿದ್ದು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕೋವಿಡ್ ಲಸಿಕೆ, ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್ಗಳನ್ನ ತರುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ರಾಜ್ಯ ಸರ್ಕಾರದ ನಡುವೆ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿ ಕರ್ನಾಟಕ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಸಿಲಿಂಡರ್ ಪೂರೈಸುವಂತೆ ನಿರ್ದೇಶನ ನೀಡಿತ್ತು. ಕಾಂಗ್ರೇಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಮ್ಮ ಪಕ್ಷದ 90 ಜನ ಶಾಸಕರ ನಿಧಿಯಿಂದ 90 ಕೋಟಿ ಮತ್ತು ಪಕ್ಷದ ವತಿಯಿಂದ 10 ಕೋಟಿ ಸೇರಿ ಒಟ್ಟು 100 ಕೋಟಿ ಹಣವನ್ನು ಕೋವಿಡ್ ಲಸಿಕೆ ತರಲು ರಾಜ್ಯ ಬಿಜೆಪಿ ಸರ್ಕಾರಕ್ಕೆ ನೀಡಲು ಮುಂದಾದರೂ ಯಾಕೋ ಸರ್ಕಾರದವರು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದಿದ್ದಾರೆ.
ನಮ್ಮ ನೆರೆ ರಾಜ್ಯ ತೆಲಂಗಾಣದಲ್ಲಿ ರಾಜ್ಯದ ಪ್ರತಿಯೊಬ್ಬ ಕೊರೊನಾ ರೋಗಿಗೆ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದ್ದಾರೆ. ಕೇರಳದಲ್ಲಿ 2ನೇ ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಿರುವ ಪಿಣರಾಯಿ ವಿಜಯನ್ ಮೊದಲ ಕೊರೊನಾ ಅಲೆ ಬಂದಾಗ ರಾಜ್ಯದ ಪ್ರತಿ ಕುಟುಂಬಕ್ಕೂ ಕೂಡ 2-3 ತಿಂಗಳಿಗೆ ಆಗುವಷ್ಟು ಉಚಿತ ರೇಷನ್ ಕಿಟ್ ನೀಡಿದ್ದರು ಹಾಗೂ ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದರು ಎಂದು ಹೇಳಿದ್ದಾರೆ.
ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆ ಧೈರ್ಯ ತೋರುತ್ತಿಲ್ಲ. ಆಡಳಿತ ಪಕ್ಷದ ಸಚಿವರೇ ಕಮಿಷನ್ ದಂಧೆಯಲ್ಲಿ ಮುಳುಗಿದ್ದಾರೆ. ಹಾಗೆಯೇ ರಾಜ್ಯದ ಮೇಲೆ ಕೇಂದ್ರ ಸರ್ಕಾರವು ಕೂಡ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೀಗೆ ಕೋವಿಡ್ ನಿರ್ವಹಣೆಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯವು ಸಂಪೂರ್ಣ ವಿಫಲವಾಗಿದೆ. ಕೋವಿಡ್ ನಿರ್ವಹಣೆಯ ನೆಪದಲ್ಲಿ ರಾಜ್ಯದ ಮಂತ್ರಿಗಳು, ಸಂಸದರು, ಕೆಲ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.