ಬೆಂಗಳೂರು: ಕೋವಿಡ್ ಮಾರ್ಗಸೂಚಿಗಳನ್ನು ಹಾಗೂ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಲಾಠಿ ಪ್ರಹಾರ ಮಾಡಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿರುವ ಹೈಕೋರ್ಟ್, ಅರ್ಜಿದಾರ ವಕೀಲರಿಗೆ 1 ಸಾವಿರ ರೂಪಾಯಿ ದಂಡ ವಿಧಿಸಿದೆ.
ಸಾರ್ವಜನಿಕರ ಮೇಲೆ ಲಾಠಿ ಪ್ರಹಾರ ಮಾಡಿರುವ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ವಕೀಲ ಬಾಲಕೃಷ್ಣನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ಪೀಠ, ಪೊಲೀಸರು ಬಾಯಿಮಾತಿನಲ್ಲಿ ಹೇಳಿದರೆ ಜನರು ಕೇಳುತ್ತಾರಾ? ನಮ್ಮ ಜನರಿಗೆ ಅಷ್ಟು ಅರಿವಿದೆಯಾ? ಕೋವಿಡ್ನಿಂದ ಎಷ್ಟು ಪೊಲೀಸರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ನೀವು ತಿಳಿದಿದ್ದೀರಾ? ಎಂದು ಅರ್ಜಿದಾರರಿಗೆ ಪ್ರಶ್ನಿಸಿದ ಪೀಠ, ಪೊಲೀಸರು ತಮ್ಮ ಖುಷಿಗಾಗಿ ಲಾಠಿ ಬೀಸುತ್ತಿಲ್ಲ. ಪ್ರಸ್ತುತ ಕೆಲವು ಪೊಲೀಸರಿಗೆ ನಿಗದಿತ ಸಮಯದಲ್ಲಿ ನೀರು, ಊಟ ಸಹ ಸಿಗುತ್ತಿಲ್ಲ. ಆದರೂ ಸಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅಲ್ಲದೇ, ಇಡೀ ಪ್ರಪಂಚ ಕೋವಿಡ್ ಸೋಂಕಿನಿಂದ ನರಳುತ್ತಿದೆ. ಹೀಗಾಗಿ ಜನ ಮನೆಯಲ್ಲಿ ಇರಲೆಂದು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಜೀವ ಭಯದ ನಡುವೆಯೂ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಪೊಲೀಸರು ಶಿಸ್ತುಬದ್ಧ ಅಧಿಕಾರಿಗಳು. ನೀವು ಹೇಳುವಂತೆ ಒಂದೆರಡು ಕಡೆ ಪೊಲೀಸರು ಚೌಕಟ್ಟು ಮೀರಿರಬಹುದು. ಹಾಗೆಂದು ಎಲ್ಲ ಪೊಲೀಸರ ಮೇಲೂ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುವುದು ಸರಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿತು.
ಅರ್ಜಿದಾರರು ತಮ್ಮ ಆರೋಪಗಳಿಗೆ ಯಾವುದೇ ಪೂರಕ ದಾಖಲೆಗಳನ್ನು ಒದಗಿಸಿಲ್ಲ. ಹಲ್ಲೆ ನಡೆಸಿದರೆ ಖಾಸಗಿ ದೂರು ದಾಖಲಿಸಬಹುದು ಎಂದು ಅಭಿಪ್ರಾಯಪಟ್ಟು ಪಿಐಎಲ್ ಅರ್ಜಿ ವಜಾ ಮಾಡಿತಲ್ಲದೇ, ಅರ್ಜಿದಾರ ವಕೀಲರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿತು.