ಬೆಂಗಳೂರು : ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಹೆಚ್. ವಿಶ್ವನಾಥ್ ಅವರ ಅನರ್ಹತೆ ಮುಂದುವರೆದಿರುವ ಕಾರಣ ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಸೂಚಿಸುವ ಮುನ್ನ ಸಿಎಂ ಅವರು ಅನರ್ಹರಾಗಿಯೇ ಮುಂದುವರೆದಿದ್ದಾರೆ ಎಂಬುದನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಶಾಸಕ ಸ್ಥಾನದಿಂದ ಅನರ್ಹಗೊಂಡು ಪರಿಷತ್ ಸದಸ್ಯರಾಗಿರುವ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಹೆಚ್ ವಿಶ್ವನಾಥ್ ಅವರಿಗೆ ಸಚಿವ ಹುದ್ದೆ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಎ.ಎಸ್ ಹರೀಶ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಇಂದು ಮಧ್ಯಂತರ ಆದೇಶ ಪ್ರಕಟಿಸಿತು.
ಯಾವುದೇ ಅನರ್ಹ ಶಾಸಕ ಅಮಾನುಗೊಂಡ ಬಳಿಕ ಮರು ಆಯ್ಕೆಯಾಗುವರೆಗೆ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬಾರದು ಎಂದು ಸಂವಿಧಾನದ ವಿಧಿ 164 (1 ಬಿ) ಹಾಗೂ 361 (ಬಿ) ಸ್ಪಷ್ಟವಾಗಿ ಹೇಳಿವೆ. ಹೆಚ್. ವಿಶ್ವನಾಥ್ ವಿಧಾನಸಭೆಗಾಗಲೀ, ಪರಿಷತ್ತಿಗಾಗಲೀ ಆಯ್ಕೆಯಾಗಿಲ್ಲ. ಬದಲಿಗೆ ನಾಮ ನಿರ್ದೇಶನಗೊಂಡಿದ್ದಾರೆ. ವಿಶ್ವನಾಥ್ ಅವರ ಅನರ್ಹತೆ ಮುಂದುವರೆದಿದ್ದು, ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವಂತಿಲ್ಲ. ಆದ್ದರಿಂದ ಸಚಿವ ಸ್ಥಾನಕ್ಕೆ ಹೆಸರುಗಳನ್ನು ಸೂಚಿಸುವಾಗ ಸಿಎಂ, ವಿಶ್ವನಾಥ್ ಅವರ ಅನರ್ಹತೆಯನ್ನು ಪರಿಗಣಿಸಬೇಕು ಎಂದು ಕೋರ್ಟ್ ನಿರ್ದೇಶಿಸಿತು.
ಇನ್ನು ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅಮಾನತುಗೊಂಡಿದ್ದರೂ, ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಸಂವಿಧಾನದ ವಿಧಿ 164 (ಬಿ) ಯಲ್ಲಿ ಅನರ್ಹಗೊಂಡ ಶಾಸಕರು ಸಚಿವರಾಗುವುದಿದ್ದಲ್ಲಿ ಅವರು ವಿಧಾನ ಸಭೆ ಅಥವಾ ಪರಿಷತ್ತಿಗೆ ಮರು ಆಯ್ಕಯಾಗಿರಬೇಕು ಎಂದು ಹೇಳಿದೆ. ಅದರಂತೆ ನಾಗರಾಜ್ ಹಾಗೂ ಶಂಕರ್ ಪರಿಷತ್ತಿಗೆ ಆಯ್ಕೆಯಾಗಿರುವುದರಿಂದ ಸಚಿವ ಸ್ಥಾನ ನೀಡದಂತೆ ಕೋರಿರುವ ಮನವಿಯನ್ನು ಪರಿಗಣಿಸಲು ಬರುವುದಿಲ್ಲ ಎಂದು ತಿಳಿಸಿ, ಅಂತಿಮ ತೀರ್ಪು ಬರುವರೆಗೂ ಪ್ರಕರಣದಲ್ಲಿ ಈ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿತು.
ಇದೇ ವೇಳೆ ರಾಜ್ಯಪಾಲರು ಸಾಂವಿಧಾನಿಕವಾಗಿ ಹಲವು ವಿನಾಯಿತಿಗಳನ್ನು ಪಡೆದಿದ್ದಾರೆ. ಅವರನ್ನು ಯಾವುದೇ ನ್ಯಾಯಾಲಯ ವಿಚಾರಣೆ ನಡೆಸಲು ಅಥವಾ ಅವರಿಗೆ ನಿರ್ದೇಶಿಸಲು ಅವಕಾಶವಿಲ್ಲ. ಹೀಗಾಗಿಯ ರಾಜ್ಯಪಾಲರನ್ನು ಅರ್ಜಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿತು. ಆದರೆ, ಸಿಎಂ ಸಂವಿಧಾನದ ಅಡಿಯಲ್ಲಿ ಹುದ್ದೆ ಪಡೆದಿರುವುದರಿಂದ ಅವರು ಸಚಿವರ ಹೆಸರುಗಳನ್ನು ಸೂಚಿಸುವ ಮುನ್ನ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ನಿರ್ದೇಶಿಸಿತು.