ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ, ವೈಎಸ್ಆರ್ಟಿಸಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರನ್ನು ಸೋಮವಾರ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ಅವರನ್ನು ಅಲ್ಲಿಂದ ಸ್ಥಳಾಂತರ ಸಹ ಮಾಡಿದ್ದಾರೆ. ಪಾದಯಾತ್ರೆ ನಡೆಸುತ್ತಿದ್ದಾಗ ಶರ್ಮಿಳಾ ಬೆಂಬಲಿಗರು ಮತ್ತು ಕೆಸಿಆರ್ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು ಇದನ್ನು ಹತ್ತಿಕ್ಕುವ ಉದ್ದೇಶದಿಂದ ತೆಲಂಗಾಣದ ಪೊಲೀಸರು ವೈಎಸ್ ಶರ್ಮಿಳಾ ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ರಾಜ್ಯ ಸರ್ಕಾರದ ದುರಾಡಳಿತ ಖಂಡಿಸಿ ಶರ್ಮಿಳಾ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ಆಡಳಿತಾರೂಢ ಪಕ್ಷವನ್ನು ಟೀಕಿಸುತ್ತಾ ಬಂದಿದ್ದರು. ಭಾನುವಾರ ಟಿಆರ್‌ಎಸ್ ಪಕ್ಷದ ನಾಯಕ ಸುದರ್ಶನ್ ರೆಡ್ಡಿ ವಿರುದ್ಧ ತೀವ್ರವಾಗಿ ಟೀಕಿಸಿದ್ದರು. ಇದರಿಂದ ಕುಪಿತರಾದ ಟಿಆರ್‌ಎಸ್ ಪಕ್ಷದ ಕಾರ್ಯಕರ್ತರು ಅವರ ವಾಹನದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಇದಕ್ಕೆ ಪ್ರತಿಯಾಗಿ ವೈಎಸ್ ಶರ್ಮಿಳಾ ಬೆಂಬಲಿಗರು ಸಹ ಈ ಕೃತ್ಯದಿಂದ ಕೆರಳಿ ಕೆಂಡವಾದರು. ಉಭಯ ಪಕ್ಷದ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಘರ್ಷಣೆಗೆ ಕಾರಣವಾಯಿತು. ಈ ಕೃತ್ಯ ಖಂಡಿಸಿ ಶರ್ಮಿಳಾ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಶಾಂತಿ ಕದಡಿದ್ದಕ್ಕಾಗಿ ಪೊಲೀಸರು ಇದೀಗ ಶರ್ಮಿಳಾ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಉಳಿದೆಲ್ಲ ಪಕ್ಷಗಳು ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿವೆ. ವೈಎಸ್‌ಆರ್‌ಟಿಪಿ ಮಾತ್ರ ಜನರ ಪರವಾಗಿ ಪಾದಯಾತ್ರೆ ನಡೆಸುತ್ತಾ ಸರ್ಕಾರದ ವೈಫಲ್ಯಗಳನ್ನು ಬಯಲಿಗೆಳೆಯುತ್ತಿದೆ. ಇದನ್ನು ಸಹಿಸಿಕೊಳ್ಳದ ಆಡಳಿತಾರೂಢ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಜನರಿಗಾಗಿ ಹೋರಾಡುತ್ತಿದ್ದರೂ ನಮ್ಮ ಪಕ್ಷದ ನಾಯಕಿಯನ್ನು ಬಂಧಿಸಿದೆ. ಅಲ್ಲದೇ ಟಿಆರ್‌ಎಸ್ ಸರ್ಕಾರದ ಷಡ್ಯಂತ್ರದ ಭಾಗವಾಗಿ ಪಾದಯಾತ್ರೆಯಲ್ಲಿದ್ದ ನಮ್ಮ ಬಸ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಪಕ್ಷದ ಕಾರ್ಯಕರ್ತರು ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: ಮೊಬೈಲಲ್ಲಿ ಮಾತಾಡಲು ಮರ, ಗುಡ್ಡ ಹತ್ಬೇಕು! ರಾಜಸ್ಥಾನದ 68 ಹಳ್ಳಿಗಳಿಗಿಲ್ಲ ನೆಟ್ವರ್ಕ್ ಭಾಗ್ಯ