ಚೆನ್ನೈ(ತಮಿಳುನಾಡು) : ತಾಂಬರಂನಿಂದ ಬೀಚ್‌ಗೆ ತೆರಳುತ್ತಿದ್ದ ಎಲೆಕ್ಟ್ರಿಕ್ ರೈಲು ಸೈದಾಪೇಟ್ ರೈಲು ನಿಲ್ದಾಣಕ್ಕೆ ಬಂದಾಗ ಯುವಕನೊಬ್ಬ ಇಂದು ಆ ಟ್ರೈನ್ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆಯ ನಂತರ ಅಲ್ಲಿದ್ದ ಪ್ರಯಾಣಿಕರು ಕಿರುಚಿಕೊಂಡು ಓಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಮಾಂಬಲಂ ರೈಲ್ವೆ ಪೊಲೀಸರು ಯುವಕನ ಶವವನ್ನು ವಶಪಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ಚೆನ್ನೈನ ನಂಗನಲ್ಲೂರಿನ ವಿಜಯ್ ರಾಜಾರಾಂ ಎಂದು ತಿಳಿದು ಬಂದಿದೆ.
ಅವರು ಬಿಇ ಮತ್ತು ಎಂಬಿಎ ಪದವೀಧರರಾಗಿದ್ದು, ಕೆಲವು ವರ್ಷಗಳ ಹಿಂದೆ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ ನಂತರ ಕೆಲಸವನ್ನು ತೊರೆದಿದ್ದರು. ನಂತರ ಕೆಲಸ ಹುಡುಕುತ್ತಿದ್ದಾಗ ಸರಿಯಾದ ಕೆಲಸ ಸಿಗದೇ ಹತಾಶೆಯಲ್ಲಿದ್ದರು. ಮತ್ತು ಅವರು ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ಮದುವೆಯಾದ ಒಂದು ವಾರದಲ್ಲಿ ಅವರ ಪತ್ನಿ ಕೆಲವು ಮನಸ್ತಾಪಗಳಿಂದ ಬೇರ್ಪಟ್ಟಿದ್ದಾರೆ ಎಂಬ ಮಾಹಿತಿಯೂ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.
ಮಾಂಬಲಂ ಪೊಲೀಸರಿಂದ ಘಟನೆಯ ಬಗ್ಗೆ ತನಿಖೆ: ಸರಿಯಾದ ನೌಕರಿ ಇಲ್ಲದೇ, ಒಳ್ಳೆಯ ಜೀವನ ಇಲ್ಲದೇ ಹತಾಶೆಯಲ್ಲಿದ್ದ ವಿಜಯ್ ರಾಜಾರಾಂ ಇಂದು ಗಿಂಡಿಯ ಕಂಪನಿಯೊಂದಕ್ಕೆ ಸಂದರ್ಶನಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದರು. ಆದರೆ ವಿಜಯ್ ರಾಜಾರಾಂ ಸೈದಾಪೇಟೆಯಲ್ಲಿ ಉಪನಗರ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವಿಜಯ್ ರಾಜಾರಾಮ್ ಅವರ ತಂದೆ ರಾಜಾರಾಮ್ ನೀಡಿದ ದೂರಿನ ಆಧಾರದ ಮೇಲೆ ಮಾಂಬಲಂ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿದ್ದ ಯುವಕ: ಇನ್ನೊಂದೆಡೆ ನೋಡ ನೋಡುತ್ತಿದ್ದಂತೆ ಯುವಕನೊಬ್ಬ ವೇಗವಾಗಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ತುನಿ ರೈಲು ನಿಲ್ದಾಣದಲ್ಲಿ (ಮಾರ್ಚ್ 13-2022)ರಂದು ನಡೆದಿತ್ತು.
ದಿಢೀರ್ ರೈಲು ಹಳಿಗೆ ತಲೆಕೊಟ್ಟ ಯುವಕ: ಇನ್ನೊಂದೆಡೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಯುವಕನೊಬ್ಬ ರೈಲಿಗೆ ತಲೆಕೊಟ್ಟು (ಫೆಬ್ರವರಿ 2-2020) ರಂದು ಬಾರದಲೋಕಕ್ಕೆ ತೆರಳಿದ್ದ. ಮಂಗಳೂರಿನಿಂದ ಸೋಲಾಪುರಕ್ಕೆ ಹೊರಟಿದ್ದ ರೈಲಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದಂತೆ ಕಂಡುಬಂದ ಅಪರಿಚಿತ ಯುವಕನೋರ್ವ ಏಕಾಏಕಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.
ಇದನ್ನೂ ಓದಿ: ಎದೆ ಝಲ್ ಎನ್ನಿಸುವ ದೃಶ್ಯ : ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿದ ಯುವಕ