ಹೀಗೂ ಉಂಟು; ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಸಲ ಕೋವಿಡ್ ಸೋಂಕಿಗೊಳಗಾದ ವ್ಯಕ್ತಿ! - ಮಧ್ಯಪ್ರದೇಶ ಕೊರೊನಾ
ಕೊರೊನಾ ಸೋಂಕಿಗೊಳಗಾಗುವ ವ್ಯಕ್ತಿಗಳು ಚೇತರಿಸಿಕೊಂಡ ಬಳಿಕ ಅವರಲ್ಲಿ ಮತ್ತೊಮ್ಮೆ ಆ ಗುಣಲಕ್ಷಣ ಕಾಣಿಸಿಕೊಳ್ಳುವುದು ಅತಿ ವಿರಳ. ಆದರೆ ಮಧ್ಯಪ್ರದೇಶದಲ್ಲಿ ಓರ್ವ ವ್ಯಕ್ತಿಗೆ ಮೂರು ಸಲ ಕೊರೊನಾ ಸೋಂಕು ತಗುಲಿದೆ.
ಗ್ವಾಲಿಯರ್(ಮಧ್ಯಪ್ರದೇಶ): 30 ವರ್ಷದ ವ್ಯಕ್ತಿಯೋರ್ವ 9 ತಿಂಗಳ ಅವಧಿಯಲ್ಲಿ ಬರೋಬ್ಬರಿ ಮೂರು ಸಲ ಕೋವಿಡ್ ಸೋಂಕಿಗೊಳಗಾಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶ ಗ್ವಾಲಿಯಾರ್ನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ವ್ಯಕ್ತಿ ಮೇಲಿಂದ ಮೇಲೆ ಕೊರೊನಾ ಸೋಂಕಿಗೊಳಗಾಗಿದ್ದಾನೆ. ಜುಲೈ 26, 2020ರಲ್ಲಿ ಪ್ರಥಮ ಬಾರಿಗೆ ಕೋವಿಡ್ ಸೋಂಕಿಗೊಳಗಾಗಿದ್ದ ವ್ಯಕ್ತಿ ತದನಂತರ ಮನೆಯಲ್ಲೇ ಚೇತರಿಸಿಕೊಂಡಿದ್ದನು. ಇದಾದ ಬಳಿಕ ಮತ್ತೊಮ್ಮೆ ಅಕ್ಟೋಬರ್ 15, 2020ರಲ್ಲಿ ಕೊರೊನಾ ಸೋಂಕಿಗೊಳಗಾಗಿ, ಚೇತರಿಕೆ ಕಂಡಿದ್ದನು. ಆದರೆ, ಇದೀಗ ಮತ್ತೊಮ್ಮೆ ಸೋಂಕಿಗೊಳಗಾಗಿದ್ದಾನೆ.
ಓರ್ವ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕಿಗೊಳಗಾಗಿ ಗುಣಮುಖನಾದ ಬಳಿಕ ಆತನಲ್ಲಿ ಪ್ರತಿಕಾಯ ಅಭಿವೃದ್ಧಿಗೊಳ್ಳುತ್ತದೆ. ಜತೆಗೆ ಹೊಸದಾಗಿ ಕೊರೊನಾ ಸೋಂಕು ಒಳಗಾಗದಂತೆ ರಕ್ಷಣೆ ಮಾಡುತ್ತದೆ. ಆದರೆ, ಈ ವ್ಯಕ್ತಿಗೆ 9 ತಿಂಗಳಲ್ಲಿ ಮೂರು ಸಲ ಕೋವಿಡ್ ಸೋಂಕು ತಗುಲಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ತಮಿಳುನಾಡು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಎಐಎಡಿಎಂಕೆ ಕೆ. ಪಳನಿಸ್ವಾಮಿ ಆಯ್ಕೆ
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜಿಲ್ಲಾ ಆರೋಗ್ಯಧಿಕಾರಿ ಡಾ. ಮನೀಶ್ ಶರ್ಮಾ, ಇಂತಹ ಪ್ರಕರಣದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಈ ಯುವಕ ಯಾವಾಗ ಮತ್ತು ಹೇಗೆ ಸೋಂಕಿಗೊಳಗಾಗಿದ್ದನು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ತದನಂತರ ಆತನ ರಕ್ತದ ಹಾಗೂ ಸ್ವ್ಯಾಬ್ ಮಾದರಿ ಪರೀಕ್ಷೆಗೊಳಪಡಿಸಲಾಗುವುದು ಎಂದಿದ್ದಾರೆ.
ಒಬ್ಬ ವ್ಯಕ್ತಿ ಪದೇ ಪದೇ ಕೊರೊನಾ ಸೋಂಕಿಗೊಳಗಾಗುವ ಪ್ರಕರಣ ಕಡಿಮೆ ಎಂದು ವೈದ್ಯರು ತಿಳಿಸಿದ್ದು, ಇದರ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.