ಕೇಶ್‌ಪುರ (ಪಶ್ಚಿಮ ಬಂಗಾಳ): ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಯುವಕನೊಬ್ಬನನ್ನು ಸಿಲುಕಿಸಿ, ಬಾಲಕಿಯೊಂದಿಗೆ ಬಲವಂತದ ಮದುವೆಗೆ ಒತ್ತಾಯಿಸಿದ್ದ ಪ್ರಕರಣವೊಂದು ಡಿಎನ್‌ಎ ಪರೀಕ್ಷೆಯಿಂದ ಬಯಲಾಗಿದೆ. ಇದರಿಂದ ಕಳೆದ 5 ವರ್ಷಗಳಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ಯುವಕ ಈಗ ನಿಟ್ಟುಸಿರುವ ಬಿಡುವಂತೆ ಆಗಿದೆ.
ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಕೇಶ್‌ಪುರದಲ್ಲಿ ಇಂತಹ ಸುಳ್ಳು ಅತ್ಯಾಚಾರ ಆರೋಪ ಹೊರಿಸಿದ್ದ ಪ್ರಕರಣ ವರದಿಯಾಗಿದೆ. ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ನಡೆದ ಡಿಎನ್ಎ ಪರೀಕ್ಷೆಯ ನಂತರ ಅಂತಿಮವಾಗಿ ಯುವಕ ನಿರಪರಾಧಿ ಎಂದು ಸಾಬೀತಾಗಿದೆ.
ಏನಿದು ಪ್ರಕರಣ?: 2017ರಲ್ಲಿ ಕೇಶ್‌ಪುರದ ಆನಂದ್‌ಪುರ ಪ್ರದೇಶದ ನಿವಾಸಿ, 13 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಳು. ಆಗ ಬಾಲಕಿಯ ಕುಟುಂಬವು ನೆರೆಮನೆಯ 22 ವರ್ಷದ ಯುವಕನ ಮೇಲೆ ಅತ್ಯಾಚಾರದ ಆರೋಪ ಮಾಡಿತ್ತು. ಮದುವೆಯ ಸುಳ್ಳು ಭರವಸೆ ನೀಡಿ ಯುವಕನು ಬಾಲಕಿಯನ್ನು ಗರ್ಭಿಣಿ ಮಾಡಿದ್ದಾನೆ ಎಂದು ಆಕೆಯ ಕುಟುಂಬ ದೂರಿತ್ತು.
ಇದನ್ನೂ ಓದಿ: 8ನೇ ತರಗತಿ ಬಾಲಕಿಯ ಮೇಲೆ ಅತ್ಯಾಚಾರ: ಸಹಪಾಠಿಗಳಿಂದಲೇ ಕೃತ್ಯ!
ಅಲ್ಲದೇ, ಇತ್ತೀಚೆಗೆ ಬಾಲಕಿಗೆ 18 ವರ್ಷ ತುಂಬಿದ್ದು, ಮದುವೆ ಆಗುವಂತೆ ಪಂಚಾಯಿತಿ ಮುಂದೆ ಯುವಕನನ್ನು ಎಳೆದೊಯ್ದು ಬಲವಂತ ಮಾಡಲಾಗಿದೆ. ಇತ್ತ, ಈಗಾಗಲೇ ಯುವತಿಗೆ ಮಗು ಕೂಡ ಆಗಿದೆ. ಇದರಿಂದ ಬೇಸತ್ತ ಯುವಕ ಊರು ಬಿಟ್ಟು ಓಡಿ ಹೋಗಿದ್ದ. ಅಲ್ಲದೇ, ತನ್ನ ವಿರುದ್ಧ ಸುಳ್ಳು ಆರೋಪ ಹೊರೆಸಲಾಗುತ್ತಿದೆ ಎಂದು ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದ.
ಡಿಎನ್ಎ ಪರೀಕ್ಷೆಗೆ ಆದೇಶಿಸಿದ್ದ ಕೋರ್ಟ್: ತನ್ನ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ಮಾಡಲಾಗಿದೆ ಎಂಬ ಯುವಕ ವಾದ ಆಲಿಸಿದ ನ್ಯಾಯಾಲಯವು, ಡಿಎನ್ಎ ಪರೀಕ್ಷೆಗೆ ಆದೇಶಿಸಿದೆ. ಈ ಆದೇಶದ ಮೇರೆಗೆ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಈ ಬಾಲಕಿ (ಈಗ ಯುವತಿ)ಗೆ ಹುಟ್ಟಿದ ಮಗುವಿನ ತಂದೆ ಈ ಯುವಕ ಅಲ್ಲ ಎಂದು ಬಹಿರಂಗವಾಗಿದೆ.
ಹೀಗಾಗಿಯೇ ಯುವಕನ ತನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಯುವತಿ ಮತ್ತು ಆಕೆಯ ತಾಯಿ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದ. ಆಗ ನ್ಯಾಯಾಲಯ ಕೂಡ ಇಬ್ಬರು ಬಂಧನಕ್ಕೆ ಆದೇಶಿಸಿತ್ತು ಎಂದು ಹೇಳಲಾಗಿದೆ. ಆದರೆ, ಇದೀಗ ಜಾಮೀನಿನ ಮೇಲೆ ಯುವತಿ ಹೊರ ಬಂದಿದ್ದಾಳೆ ಎಂದು ತಿಳಿದು ಬಂದಿದೆ.
ಯುವಕನ ವಿರುದ್ಧ ಪಿತೂರಿ: ಅಪ್ರಾಪ್ತ ವಯಸ್ಸಿನಲ್ಲೇ ಯುವತಿ ನನ್ನ ಕಕ್ಷಿದಾರನಿಗೆ ಮೋಸ ಮಾಡಿದ್ದಾಳೆ ಎಂಬುದು ಡಿಎನ್‌ಎ ಪರೀಕ್ಷೆಯಿಂದ ಸಾಬೀತಾಗಿದೆ. ಜೊತೆಗೆ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯವು ಆಕೆಗೆ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ, ಹೆಣ್ಣು ಮಗುವಿನ ನಿಜವಾದ ತಂದೆ ಇನ್ನೂ ಗೊತ್ತಾಗಿಲ್ಲ. ಅಲ್ಲದೇ, ನನ್ನ ಕಕ್ಷಿದಾರನ ಯಾರು ಈ ಪಿತೂರಿ ಮಾಡಿದ್ದರು ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಸೂಕ್ತ ತನಿಖೆಯ ನಂತರವೇ ಸತ್ಯ ಹೊರಬರಲಿದೆ ಎಂದು ಯುವಕನ ಪರ ವಕೀಲ ಶಮಿಕ್ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ತೆಲಂಗಾಣ: ಹೆತ್ತ ಮಗಳನ್ನೇ ಹಣಕ್ಕಾಗಿ ಮಾರಿದ ತಾಯಿ