ಡುಂಗರಪುರ(ರಾಜಸ್ಥಾನ): ಹಬ್ಬ-ಹರಿದಿನಗಳು ಇದ್ದಾಗ ವಿಶೇಷ ಕ್ರೀಡಾ ಕೂಟಗಳು ಆಯೋಜಿಸುವುದು ಸಹಜ. ಈ ರೀತಿ ಕ್ರೀಡಾಕೂಟಗಳನ್ನು ಮಾಡುವಾಗ ಊರಿನಲ್ಲಿ ಚಂದಾ ಸಂಗ್ರಹಿಸಿ ಆಟೋಟಗಳನ್ನು ಆಯೋಜಿಸುತ್ತಾರೆ. ಇದು ಹಬ್ಬದ ದಿನಗಳಲ್ಲಿ ಮನರಂಜನೆ ಮತ್ತು ಊರಿನವರನ್ನು ಒಂದೆಡೆ ಒಗ್ಗೂಡಿಸಲು ಸಹಾಯವಾಗುತ್ತದೆ. ದೇವಾಲಯದ ಹೆಸರು ಅಥವಾ ಸಂಘಟನೆಯ ಹೆಸರಿನಲ್ಲಿ ಇಂತಹ ಆಯೋಜನೆಗಳು ಎಲ್ಲೆಡೆ ಜರುಗುವುದು ಕಾಮನ್. ಆದರೆ, ರಾಜಸ್ಥಾನದಲ್ಲಿ ದೇಣಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಕೊಲೆಯೇ ನಡೆದು ಹೋಗಿದೆ.
ಹೌದು.. ಚಂದಾ ಕೇಳಿದ್ದಕ್ಕೆ ನೀಡಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಆಟ ಆಯೋಜಿಸಲು ಹಣಕ್ಕಾಗಿ ದೇಣಿಗೆ ಕೇಳಿದಾಗ ಕೊಡಲು ನಿರಾಕರಿಸಿದ್ದಾರೆ ಎಂದು ಗುಂಪಿನಲ್ಲಿ ಯುವಕರು ಹಲ್ಲೆ ಮಾಡಿದ್ದು, ಇದರಿಂದ ಒಬ್ಬ ಯುವಕನ ಪ್ರಾಣ ಪಕ್ಷಿಯೇ ಹಾರಿಹೋಗಿದೆ.
ಈ ಘಟನೆ ಸಂಕ್ರಾಂತಿಯಂದು ಶನಿವಾರ ರಾಜಸ್ಥಾನದ ಡುಂಗರಪುರ ಜಿಲ್ಲೆಯ ಕರ್ವಾ ಖಾಸ್ ಎಂಬಲ್ಲಿ ಜರುಗಿದೆ. ಜಿಲ್ಲೆಯ ಆಸ್ಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತಿ ಪ್ರಕರಣ ದಾಖಲಾಗಿದೆ. ಮಕರ ಸಂಕ್ರಾಂತಿಯಂದು ಗಿಡ ಚುಕ್ಕೆ ಎಂಬ ಆಟ ಆಡುತ್ತಿದ್ದ ಯುವಕರು ರಸ್ತೆಯಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಅಡ್ಡಹಾಕಿ 100 ರೂಪಾಯಿ ದೇಣಿಗೆ ನೀಡುವಂತೆ ಕೇಳಿದ್ದಾರೆ. ಆದರೆ, ಆ ವ್ಯಕ್ತಿ ದೇಣಿಗೆ ನೀಡಲು ನಿರಾಕರಿಸಿದಾಗ ಆಟ ಆಡುತ್ತಿದ್ದ ಹುಡುಗರು ಆತನಿಗೆ ಥಳಿಸಿದ್ದಾರೆ. ಈ ವೇಳೆ ಆರೋಪಿಗಳಲ್ಲೊಬ್ಬ ದೊಣ್ಣೆಯಿಂದ ಆತನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತಲೆಗೆ ಜೋರಾಗಿ ಪಟ್ಟು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಾವನ್ನಪ್ಪಿದ್ದನ್ನು ಕಂಡು ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಬಗ್ಗೆ ತಿಳಿದ ಕೂಡಲೇ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ತೆಗೆದು ಕೊಂಡು ಹೋಗಲು ಬಿಡದೇ ಪರಿಹಾರಕ್ಕಾಗಿ ಕುಟುಂಬಸ್ಥರು ಪಟ್ಟು ಹಿಡಿದರು. ಪೊಲೀಸರು ಆರೋಪಿಗಳಿಂದ 20 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ನಂತರ ಮರಣೋತ್ತರ ಪರೀಕ್ಷೆಗೆ ಅನುವು ಮಾಡಿಕೊಟ್ಟರು.
ಪೊಲೀಸರು ನೀಡಿದ ಮಾಹಿತಿಯಂತೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಯುವಕರ ಗುಂಪು ಗಿಡ ಚುಕ್ಕೆ ಆಟ ಆಡುತ್ತಿತ್ತು. ಇದೇ ವೇಳೆ, ಸ್ಥಳೀಯ ನಿವಾಸಿ ನಾಥು ಮೀನಾ (38) ಅಲ್ಲಿ ಬೈಕ್ನಲ್ಲಿ ಹಾದುಹೋಗುತ್ತಿದ್ದಗ ಯುವಕರು ಅಡ್ಡಹಾಕಿದ್ದಾರೆ. ಹಾಗೂ ಅವರಲ್ಲಿ 100ರೂ ದೇಣಿಗೆಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ನಾಥು ಅವರು ನಿರಾಕರಿಸಿದಕ್ಕೆ ಯುವಕರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ನಡುವೆ ಒಬ್ಬ ಯುವಕ ನಾಥು ಅವರ ತಲೆಗೆ ಬಲವಾಗಿ ಹಲ್ಲೆ ಮಾಡಿದ್ದು, ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಹಲ್ಲೆಯ ಮಾಹಿತಿ ತಿಳಿದ ಗ್ರಾಮಸ್ಥರು ಗಾಯಗೊಂಡ ಯುವಕನನ್ನು ಆಸ್ಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ವೈದ್ಯರು ಆಸ್ಪತ್ರೆಗೆ ಬರುವ ಮೊದಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಶನಿವಾರ ಬೆಳಗ್ಗೆ ಶವಾಗಾರದ ಬಳಿ ಸಂಬಂಧಿಕರು ಜಮಾಯಿಸಿ ಸಾವಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಗಳ ಕಡೆಯವರಿಂದ 20 ಲಕ್ಷ ಪರಿಹಾರ ಕೊಡಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮೃತ ವ್ಯಕ್ತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಹಾಗೂ ಅವನಿಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ದಲಿತ ಬಡಾವಣೆಯಲ್ಲಿ ಕಲ್ಲು ತೂರಾಟ: ಬಿಜೆಪಿ ಮುಖಂಡ ಸೇರಿ 15 ಜನರ ವಿರುದ್ಧ ಎಫ್ಐಆರ್