ಭುವನೇಶ್ವರ್ (ಒಡಿಶಾ): ಮಹಿಳೆಯರೀಗ ಮನೆಯ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿಲ್ಲ. ತಮ್ಮ ಕನಸುಗಳನ್ನು ಈಡೇರಿಸುವ ಸಲುವಾಗಿ ಮನೆಯಿಂದ ಹೊರ ಬಂದು ಆಕಾಶದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದಾರೆ.
ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಹೆಜ್ಜೆ ಗುರುತು ಮೂಡುತ್ತಿದೆ. ಆದರೆ, ಅವರ ಈ ಸಾಧನೆಯ ಹಾದಿಗೆ ಋತುಸ್ರಾವ ಒಮ್ಮೊಮ್ಮೆ ಅಡ್ಡಿಯಾಗುತ್ತದೆ. ಮುಟ್ಟಿನ ವಿಚಾರವಾಗಿ ಯಾವುದೇ ವ್ಯಕ್ತಿಯೊಂದಿಗೆ ಮನಬಿಚ್ಚಿ ಚರ್ಚಿಸಲು ಈಗಲೂ ಹಿಂಜರಿಯುತ್ತಾರೆ.
ಆದರೆ, ಇಂತಹ ಕಷ್ಟಗಳನ್ನು ನಿವಾರಿಸುವ ಸಲುವಾಗಿ ಯುವ ಇಂಜಿನಿಯರ್ ಹೃದಾನಂದಾ ಪೃಷ್ಟಿ ಹ್ಯಾಪಿನೆಸ್ ಕಿಟ್ ಎಂಬ ಹೊಸ ಕೊಠಡಿಯನ್ನ ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಿದ್ದಾರೆ.
ಈ ಕಿಟ್‌ನಲ್ಲಿ ಸ್ಯಾನಿಟರಿ ಪ್ಯಾಡ್, ಹತ್ತಿ, ಟಿಶ್ಯೂ, ಸೋಪ್, ಸ್ಯಾನಿಟೈಸರ್ ಮತ್ತು ವಿಶ್ರಾಂತಿಗಾಗಿ ಕುರ್ಚಿ ಸಹ ಇದೆ. ಶಾಲೆಗಳು ಮತ್ತು ಕಾಲೇಜು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಈ ಕಿಟ್ ಲಭ್ಯವಿರುತ್ತದೆ.
ಹೃದಾನಂದಾ ಅವರ ಈ ಯೋಜನೆಯನ್ನು ಜಾರಿಗೆ ತಂದರೆ ಮಹಿಳೆಯರು ತಮ್ಮ ಮನೆಯಿಂದ ಹೊರ ಬಂದಾಗ ಅವರ ಮನಸ್ಸಿನಲ್ಲಿ ಯಾವುದೇ ಭಯ ಅಥವಾ ಹಿಂಜರಿಕೆ ಇಲ್ಲದೇ ಆರಾಮವಾಗಿ ಇರಬಹುದು.
ಯಾವುದೇ ಚಿಂತೆಯಿಲ್ಲದೇ ಅವರು ತಮ್ಮ ಮುಟ್ಟಿನ ಅವಧಿಯಲ್ಲಿ ಎಂದಿನ ದಿನದಂತೆ ಹೊರಗೆ ಹೋಗಬಹುದು. ವಿಶ್ವ ಆರೋಗ್ಯ ಸಂಸ್ಥೆ ಹೃದಾನಂದಾ ಅವರ ಈ ಕಿಟ್ ಅನ್ನು ಮೆಚ್ಚಿಗೆ ಸೂಚಿಸಿದೆ. ಮತ್ತು ಅದರ ತಾಂತ್ರಿಕ ತಂಡದ ಅನುಮೋದನೆಯ ನಂತರ ಅದನ್ನು ಕಾರ್ಯಗತಗೊಳಿಸುವ ಭರವಸೆಯನ್ನೂ ನೀಡಿದೆ.
ಮತ್ತೊಂದೆಡೆ, ಮಹಿಳೆಯರಿಗೆ ಶಿಕ್ಷಣ ನೀಡಲು ಮತ್ತು ಈ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಲು ಹೃದಾನಂದಾ ಅವರು “ಅಭಿಜನ್ ಮಿಷನ್” ಅನ್ನು ಪ್ರಾರಂಭಿಸಿದ್ದಾರೆ. ಈ ಕಾರ್ಯಾಚರಣೆಯೊಂದಿಗೆ ಸುಮಾರು 100 ಮಹಿಳೆಯರು ತೊಡಗಿಸಿಕೊಂಡಿದ್ದಾರೆ.
ಹೃದಾನಂದಾ ಅವರು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಯೋಜನೆಯ ಪ್ರಯೋಜನಗಳನ್ನು ಗಣನೆಗೆ ತೆಗೆದುಕೊಂಡು ಅನುಮೋದನೆ ನೀಡುವಂತೆ ಕೋರಿದ್ದಾರೆ. ಆದ್ದರಿಂದ ಈ 'ಹ್ಯಾಪಿನೆಸ್‌ಕಿಟ್' ಜಾರಿಗೆ ಬಂದರೆ, ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಲಾಭವಾಗುತ್ತದೆ.