ಗೋರಖ್ಪೂರ್: ಬೇರೆ ಸಮುದಾಯದ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ತಂದೆಯೊಬ್ಬ ತನ್ನ ಹೆತ್ತ ಮಗಳನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಬೆಲ್ಘಟ್ ಗ್ರಾಮದಲ್ಲಿ ನಡೆದಿದೆ.
ಬೆಲ್ಘಟ್ ನಿವಾಸಿ ರಂಜನಾ ಯಾದವ್ ಅನ್ಯ ಕೋಮಿನ ಯವಕನೊಬ್ಬನನ್ನು ಪ್ರೀತಿಸಿದ್ದಳು. ಇವರ ಮದುವೆಗೆ ಯುವತಿ ತಂದೆ ಕೈಲಾಶ್ ಯಾದವ್ ಅಂಗೀಕರಿಸಲಿಲ್ಲ. ಆ ಯುವಕನೊಂದಿಗೆ ಮಾತನಾಡಬೇಡ ಅಂತಾ ಹೇಳಿದರೂ ಸಹ ರಂಜನಾ ಕೇಳಿರಲಿಲ್ಲ. ಹೀಗಾಗಿ ಆಕೆಯ ಕೊಲೆಗೆ ಹೆತ್ತ ತಂದೆಯೇ ಸ್ಕೆಚ್ ಹಾಕಿದ್ದಾನೆ. ಕಾಂಟ್ರಾಕ್ಟ್ ಕಿಲ್ಲರ್ಗೆ ತನ್ನ ಮಗಳನ್ನು ಕೊಲ್ಲಲು ಒಂದೂವರೆ ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಾನೆ.
ಫೆಬ್ರವರಿ 3ರಂದು ರಂಜಳಾನ್ನು ಆಕೆಯ ತಂದೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಯುವತಿಯ ಅಣ್ಣ ಅಜಿತ್ ಯಾದವ್, ಬಾವ ಸತ್ಯ ಪ್ರಕಾಶ್ ಯಾದವ್ ಸಹಾಯದಿಂದ ಆಕೆಯ ಕೈ-ಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಸುಪಾರಿ ಕಿಲ್ಲರ್ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಫೆಬ್ರವರಿ ನಾಲ್ಕರಂದು ಧಂಗಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಗ್ನವಾಗಿ ಸುಟ್ಟು ಕರಕಲವಾಗಿರುವ ಯುವತಿಯ ದೇಹ ಪತ್ತೆಯಾಗಿದೆ. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮೂಲಕ ಯುವತಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಾಗ ಮಗಳನ್ನು ಕೊಲೆ ಮಾಡಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸುಪಾರಿ ಕಿಲ್ಲರ್ ವರುಣ್ ತಿವಾರಿ ಹುಡುಕಾಟದಲ್ಲಿ ಮಗ್ನರಾಗಿದ್ದಾರೆ.