ಚೆನ್ನೈ: ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್ಶಿಪ್ ವೇಳೆ ಅಪಘಾತಕ್ಕೀಡಾಗಿ ಬೆಂಗಳೂರಿನ 13 ವರ್ಷದ ಪ್ರತಿಭಾನ್ವಿತ ರೈಡರ್ ಶ್ರೇಯಸ್ ಹರೀಶ್ ಸಾವನ್ನಪ್ಪಿದ್ದಾರೆ. ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ನಡೆಯುತ್ತಿದ್ದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಭಾರತೀಯ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಯಸ್ ಹರೀಶ್ ಭಾಗವಹಿಸಿದ್ದರು. ಇಂದು (ಶನಿವಾರ) ಚಾಂಪಿಯನ್ಶಿಪ್ನ ಮೂರನೇ ಸುತ್ತಿನ ವೇಳೆ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಚೆನ್ನೈನಲ್ಲಿ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರೇಸಿಂಗ್ ಸ್ಪರ್ಧೆಯಲ್ಲಿ ಶ್ರೇಯಸ್ ಶನಿವಾರ ಬೆಳಗ್ಗೆ ಒಂದು ಹಂತವನ್ನು ಕ್ವಾಲಿಫೈ ಆಗಿದ್ದರು. ಬಳಿಕ ಮೂರನೇ ರೌಂಡಿನಲ್ಲಿ ಅಪಘಾತಕ್ಕೀಡಾಗಿದ್ದರಿಂದ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ತಕ್ಷಣವೇ ಆಂಬ್ಯುಲನ್ಸ್ನಲ್ಲಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ವೈದ್ಯರು ಪರೀಕ್ಷಿಸಿ, ಶ್ರೇಯಸ್ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ.
ಶ್ರೇಯಸ್ ತನ್ನ ರೇಸಿಂಗ್ ಪ್ರತಿಭೆಯಿಂದ ಹೊಸ ಅಲೆ ಸೃಷ್ಟಿಸುತ್ತಿದ್ದರು. ಘಟನೆಯಾದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಕಿರಿ ಮತ್ತು ಪ್ರತಿಭಾನ್ವಿತ ರೈಡರ್ ಅನ್ನು ಕಳೆದುಕೊಂಡಿರುವುದು ದುರಂತ ಎಂದು ಎಂಎಂಎಸ್‌ಸಿ ಅಧ್ಯಕ್ಷ ಅಜಿತ್ ಥಾಮಸ್ ಕಂಬಿನಿ ಮಿಡಿದಿದ್ದಾರೆ. ಈ ಮೋಟಾರ್ ಸೈಕಲ್ ರೇಸ್ ಚಾಂಪಿಯನ್ಶಿಪ್ಅನ್ನು ಶನಿವಾರ ಮತ್ತು ಭಾನುವಾರ ಆಯೋಜಿಸಲಾಗಿತ್ತು. ಘಟನೆಯ ಬಳಿಕ ಈ ಟೂರ್ನಿಯನ್ನು ರದ್ದುಗೊಳಿಸಿ, ರೈಡರ್ ಸಾವಿಗೆ ಎಂಎಂಎಸ್‌ಸಿ ಸಂತಾಪ ಸೂಚಿಸಿದೆ.
ಶ್ರೇಯಸ್ ಹರೀಶ್ ಯಾರು? ಬೆಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಜುಲೈ 26, 2010 ರಂದು ಜನಿಸಿದ್ದು, ಮೋಟಾರ್ ಸೈಕಲ್ ರೇಸಿಂಗ್ನಲ್ಲಿ ಹೆಸರು ಗಳಿಸುತ್ತಿದ್ದರು. ಈಗಾಗಲೇ ಪೆಟ್ರೋನಾಸ್ ಟಿವಿಸ್ ಸೇರಿ ರಾಷ್ಟ್ರೀಯ ಮಟ್ಟದ ಹಲವು ರೇಸಿಂಗ್ ಚಾಂಪಿಯನ್ಶಿಪ್ಗಳನ್ನು ಗೆದ್ದು ಉದಯೋನ್ಮುಖ ತಾರೆಯಾಗಿ ಬೆಳೆಯುತ್ತಿದ್ದರು.
ಸ್ಪೇಪನ್ ಹಾಗೂ ಭಾರತದಲ್ಲಿ ನಡೆದ MiniGP ಟೈಟಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಶ್ರೇಯಸ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿ ಸಾಧನೆಗೈದಿದ್ದರು. ಹಾಗೆಯೇ ಆಗಸ್ಟ್ನಲ್ಲಿ ಮಲೇಷಿಯಾದಲ್ಲಿ ನಡೆಯಲಿದ್ದ ಎಂಎಸ್ಬಿಕೆ ಚಾಂಪಿಯನ್‌ಶಿಪ್‌ನಲ್ಲಿ 250cc ವಿಭಾಗದಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದರು.
ಇದೇ ವರ್ಷ ಜನವರಿಯಲ್ಲಿ 59 ವರ್ಷದ ಕೆಇ ಕುಮಾರ್ ಎಂಬ ರೈಡರ್ ಕೂಡ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಇದೀಗ ಮತ್ತೊಂದು ಅಂತಹದೇ ಘಟನೆ ಮರುಕಳಿಸಿದೆ.
ಇದನ್ನೂ ಓದಿ: ನದಿಗೆ ಉರುಳಿ ಬಿದ್ದ ಬಸ್: ಹಲವರು ಸಾವನಪ್ಪಿರುವ ಶಂಕೆ