ಮಧ್ಯಪ್ರದೇಶ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಇಲ್ಲಿನ ರೇವಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹನುಮನ್ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಜುನ್ ಪುರ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.
ಸೊಂಟಕ್ಕೆ ಧರಿಸಿಕೊಳ್ಳುವ ಬೆಲ್ಟ್‌ನಿಂದ ಯುವಕನ ಕುತ್ತಿಗೆ ಬಿಗಿದ ಸ್ಥಳೀಯರು ಕ್ರೂರವಾಗಿ ಎಳೆದಾಡಿದ್ದಲ್ಲದೆ ಕೋಲು ಹಾಗೂ ಬಡಿಗೆಯಿಂದ ರಕ್ತ ಬರುವ ಹಾಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪ್ರತ್ಯಕ್ಷದರ್ಶಿಗಳು ಯಾರೂ ಕೂಡಾ ಯುವಕನ ರಕ್ಷಣೆಗೆ ಧಾವಿಸಲಿಲ್ಲ. ಹಲ್ಲೆಗೊಳಗಾದ ಯುವಕ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದನಂತೆ.
ಇದು ಸುಮಾರು 8 ದಿನದ ಹಿಂದೆ ನಡೆದಿರುವ ಘಟನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಥಳಿಸಿದ ಯುವಕರ ಗುಂಪು ಪರಾರಿಯಾಗಿದ್ದು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ವರ್ಮಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.