ಪೂರ್ವ ಗೋದಾವರಿ(ಆಂಧ್ರಪ್ರದೇಶ): ಇತ್ತೀಚಿನ ದಿನಗಳಲ್ಲಿ ವಿವಿಧ ಲೋನ್ ಆ್ಯಪ್ಗಳ ಮೂಲಕ ಸಾಲ ಪಡೆದುಕೊಂಡು ಮೋಸ ಹೋಗುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಆನ್ಲೈನ್ ಮೂಲಕ ಸಾಲ ನೀಡಿ, ತದನಂತರ ಹೆಚ್ಚಿನ ಬಡ್ಡಿ ಹಣ ಪಾವತಿಸುವಂತೆ ಕಿರುಕುಳ ನೀಡುತ್ತಿರುವ ಪ್ರಕರಣ ಮೇಲಿಂದ ಮೇಲೆ ಕಂಡು ಬರುತ್ತಿವೆ. ಇದರ ಮಧ್ಯೆ ಗ್ರಾಹಕರ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಚಿತ್ರಹಿಂಸೆ ನೀಡಲಾಗ್ತಿದೆ. ಸದ್ಯ ಅಂಥದ್ದೊಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಪೂರ್ವ ಗೋದಾವರಿಯ ರಾಜಮಹೇಂದ್ರವರಂನ ಯುವಕನೋರ್ವ ವಿದ್ಯಾಭ್ಯಾಸಕ್ಕಾಗಿ ಲೋನ್ ಆ್ಯಪ್ನಿಂದ ಸಾಲ ಪಡೆದುಕೊಂಡಿದ್ದ. ಇದಾದ ಕೆಲ ದಿನಗಳ ನಂತರ ಹಣ ವಾಪಸ್ ನೀಡುವಂತೆ ಆತನಿಗೆ ಒತ್ತಡ ಹೇರಲಾಗಿದೆ. ಇದರ ಮಧ್ಯೆ ಆತನ ಮುಖದ ಭಾಗವನ್ನು ಮತ್ತೊಂದು ಬೆತ್ತಲೆ ಫೋಟೋಗೆ ಸಿಕ್ಕಿಸಿ ಇತರೆ ವ್ಯಾಟ್ಸಾಪ್ ಸಂಖ್ಯೆಗಳಿಗೆ ಕಳುಹಿಸಲಾಗಿದೆ. ಇದರಿಂದ ತೀವ್ರ ಮಾನಸಿಕ ಖಿನ್ನತೆಗೊಳಗಾದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಆತ್ಮಹತ್ಯೆಗೆ ಶರಣಾದ ನಂತರವೂ ಫೋನ್ ನಂಬರ್ಗೆ ಸಂದೇಶ ರವಾನೆ ಮಾಡಲಾಗಿದ್ದು, ಪ್ರಕರಣ ಬಯಲಿಗೆ ಬಂದಿದೆ.
ಇದನ್ನೂ ಓದಿ: ಭಲೇ ಅಜ್ಜಿ.. ಗಂಗಾ ನದಿಗೆ ಹಾರಿ ಈಜಿದ 70ರ ವೃದ್ಧೆ! Video
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಪೂರ್ವ ಗೋದಾವರಿ ಜಿಲ್ಲೆಯ ಸತೀಶ್(28) ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದು, ಮುಂದಿನ ಅಧ್ಯಯನಕ್ಕಾಗಿ ಲೋನ್ ಆ್ಯಪ್ನಿಂದ ಸಾಲ ಪಡೆದುಕೊಂಡಿದ್ದ. ಕೆಲ ತಿಂಗಳು ಕಳೆದ ನಂತರ ಹಣ ಮರುಪಾವತಿ ಮಾಡುವಂತೆ ಆತನ ಮೇಲೆ ಒತ್ತಡ ಹೇರಲಾಗಿದೆ. ಇದರ ಮಧ್ಯೆ ಆತನ ಮುಖವನ್ನು ಮತ್ತೊಂದು ನಗ್ನ ಫೋಟೋಗೆ ಅಂಟಿಸಿ, ಇತರೆ ವ್ಯಾಟ್ಸಾಪ್ ಸಂಖ್ಯೆಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಖಿನ್ನತೆಗೊಳಗಾದ ಸತೀಶ್ ಕಳೆದ ಜೂನ್ 24ರಂದು ಸಿನಿಮಾ ನೋಡಲು ಹೋಗುವುದಾಗಿ ಹೇಳಿ, ಭೀಮಾವರಂ ಬಳಿ ರೈಲ್ವೇ ಹಳಿ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರುದಿನ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗಿದೆ. ಮಾರ್ಚ್ 26ರಂದು ಸತೀಶ್ ಬಳಕೆ ಮಾಡ್ತಿದ್ದ ಫೋನ್ಗೆ ಸಂದೇಶ ಬಂದಿದೆ. ಇದರಿಂದ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗಿದೆ. ಇನ್ನೂ ಸಾಲ ತೀರಿಸದಿದ್ದರೆ ಕುಟುಂಬದ ಸದಸ್ಯರ ಫೋಟೋಗಳನ್ನೂ ಮಾರ್ಫಿಂಗ್ ಮಾಡಿ ಎಲ್ಲರಿಗೂ ಕಳುಹಿಸುವ ಬೆದರಿಕೆ ಹಾಕಲಾಗ್ತಿದೆ ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ರಾಂಬಾಬು ತಿಳಿಸಿದ್ದಾರೆ.