ನವದೆಹಲಿ: ರಾಷ್ಟ್ರ ರಾಜಧಾನಿ ಶಹಬಾದ್ ಡೈರಿಯಲ್ಲಿ ಪ್ರೀತಿಸಿದವಳನ್ನು 24 ಬಾರಿ ಇರಿದು ಕೊಂದ ಘಟನೆ ಘಟನೆ ನಡೆದು ಕೆಲವೇ ದಿನಗಳಾಗಿದ್ದು, ಅಂಥಹದ್ದೇ ಮತ್ತೊಂದು ಬೆಚ್ಚಿ ಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಯುವತಿಯ ಕತ್ತು ಸೀಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಯುವತಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಳು. ಪ್ರೀತಿಗಾಗಿ ಪೀಡಿಸುತ್ತಿದ್ದ ಯುವಕ ಆಕೆಯ ಕಚೇರಿಗೆ ಆಗಮಿಸಿದ್ದಾನೆ. ಈ ವೇಳೆ ತಗಾದೆ ತೆಗೆದು ಒತ್ತಾಯಿಸಿದ್ದಾನೆ. ಯುವತಿ ಒಪ್ಪದಿದ್ದಾಗ ಚಾಕುವಿನಿಂದ ಕತ್ತು ಸೀಳಿದ್ದಾನೆ. ಅಲ್ಲಿದ್ದ ಸಿಬ್ಬಂದಿ ಆತನನ್ನು ಹಿಡಿದಾಗ, ಯುವತಿ ತಪ್ಪಿಸಿಕೊಂಡಿದ್ದಾಳೆ. ಬಳಿಕ ಯುವಕ ಕೋಣೆಯೊಂದರಲ್ಲಿ ಹೋಗಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಯುವಕನ ಒನ್ಸೈಡ್ ಪ್ರೇಮ್ ಕಹಾನಿ: ದೆಹಲಿಯ ರೋಹಿಣಿ ಜಿಲ್ಲೆಯ ಬೇಗಂಪುರದಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, 20 ವರ್ಷದ ಅಮಿತ್ ಕೊಲೆಗೆ ಯತ್ನಿಸಿ, ಆತ್ಮಹತ್ಯೆ ಮಾಡಿಕೊಂಡವ. ಉದ್ಯೋಗಸ್ಥೆಯಾಗಿದ್ದ ಯುವತಿಗೆ ಅಮಿತ್ ದಿನವೂ ಪ್ರೀತಿಗಾಗಿ ಪ್ರಾಣ ಹಿಂಡುತ್ತಿದ್ದ. ಆದರೆ, ಇದನ್ನು ಆಕೆ ನಿರಾಕರಣೆ ಮಾಡಿದ್ದಳು. ಇಷ್ಟಾದರೂ ಬಿಡದ ಅಮಿತ್, ನೇರವಾಗಿ ಯುವತಿಯ ಆಫೀಸಿಗೆ ಬಂದಿದ್ದಾನೆ. ಶುಕ್ರವಾರ ಮಧ್ಯಾಹ್ನ ಕಚೇರಿಯಲ್ಲಿ ಅಮಿತ್ ಹಾಗೂ ಆತನ ಇಬ್ಬರು ಸಹಚರರು ಹಾಜರಿದ್ದರು.
ಕಚೇರಿ ಬಂದ ಯುವತಿಯನ್ನು ಪ್ರೀತಿಸಲು ಮತ್ತೆ ಕಾಡಿದ್ದಾನೆ. ಆದರಾಕೆ ನಿರಾಕರಣೆ ಮಾಡುತ್ತಲೇ ಇದ್ದಳು. ಇದರಿಂದ ರೊಚ್ಚಿಗೆದ್ದ ಯುವಕ ಹೊರಗೆ ತೆರಳಿ ಚಾಕುವನ್ನು ತಂದು ಆಕೆಯ ಕತ್ತು ಸೀಳಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಯುವತಿಯನ್ನು ಕಂಡ ಸಹ ಸಿಬ್ಬಂದಿ ಅಮಿತ್ನನ್ನು ಹಿಡಿದಿದ್ದಾರೆ. ಆಗ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಓಡಿದ್ದಾಳೆ.
ಇದನ್ನೂ ಓದಿ: ರೈಲು ದುರಂತ: ಕನ್ನಡಿಗರ ಸುರಕ್ಷತೆಗಾಗಿ ಘಟನಾ ಸ್ಥಳಕ್ಕೆ ಸಂತೋಷ್ ಲಾಡ್; ಧಾರವಾಡದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ರದ್ದು
ಇದಾದ ಬಳಿಕ ಅಮಿತ್ ಕಚೇರಿಯ ಕೊಠಡಿಯೊಂದರೊಳಕ್ಕೆ ಹೋಗಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ. ಅಲ್ಲಿದ್ದವರು ತಕ್ಷಣ ಪೊಲೀಸರು ಮತ್ತು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಅಮಿತ್ ಅಡಗಿದ್ದ ಕೋಣೆಯನ್ನು ಮುರಿದು ನೋಡಿದಾಗ ಅಲ್ಲಿ ಆತ ಹೆಣವಾಗಿ ಮಲಗಿದ್ದ. ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಘಟನೆಯ ಬಗ್ಗೆ ತೀವ್ರ ಗಾಯಗೊಂಡ ಯುವತಿಯ ಸಂಬಂಧಿಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟೆಲ್ಲಾ ಅನಾಹುತಕ್ಕೆ ಯುವಕನ ಒನ್ಸೈಡ್ ಪ್ರೀತಿಯೇ ಕಾರಣ. ಆಕೆ ತನ್ನ ಪ್ರೀತಿಯನ್ನು ಅಲ್ಲಗಳೆದಿದ್ದರೂ, ಯುವಕ ಬೆಂಬಿಡದೇ ಕಾಡಿದ್ದು ಅನಾಹುತಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೋರಮಂಡಲ್ ರೈಲಿಗೆ 'ಕರಾಳ ಶುಕ್ರವಾರ': 14 ವರ್ಷಗಳ ಹಿಂದೆ ಹಳಿತಪ್ಪಿ ನಡೆದಿತ್ತು ದುರಂತ!