ಪಲ್ನಾಡು (ಆಂಧ್ರಪ್ರದೇಶ): ಸಾವು ಯಾವಾಗ ಮತ್ತು ಹೇಗೆ ಬರುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಆರೋಗ್ಯಕರವಾಗಿ ಕಾಣುವವರು ಮತ್ತು ಎಲ್ಲರೊಂದಿಗೆ ಬೆರತು ಇದ್ದವರೂ ಕೆಲವೊಮ್ಮೆ ಇದ್ದಕ್ಕಿದ್ದಂತೆ ಪ್ರಾಣ ಕಳೆದುಕೊಳ್ಳುತ್ತಾರೆ. ಇಂತಹದ್ದೊಂದು ಘಟನೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನಡೆದಿದೆ. ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಯುವಕನೋರ್ವನ ಹೃದಯ ಏಕಾಏಕಿ ಸ್ತಬ್ಧವಾಗಿದೆ.
ಇಲ್ಲಿನ ಚಿಲಕಲೂರಿಪೇಟೆಯಲ್ಲಿ ಕಿಶೋರ್ ಎಂಬ ಯುವಕ ಶಟಲ್ ಅಂಕಣದಲ್ಲಿ ನೋಡನೋಡುತ್ತಿದ್ದಂತೆ ಎಲ್ಲರೆದುರೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ಮಲ್ಲೇಲ ಬುಚ್ಚಯ್ಯ ಅವರ ಮೊಮ್ಮಗ ಕಿಶೋರ್ ಮಂಗಳವಾರ ರಾತ್ರಿ ಖಾಸಗಿ ಶಟಲ್ ಕ್ಲಬ್‌ನಲ್ಲಿ ಸ್ನೇಹಿತರೊಂದಿಗೆ ಸೇರಿ ಆಡುತ್ತಿದ್ದರು. ಈ ವೇಳೆ ಆಟವಾಡುತ್ತಲೇ ಅಂಕಣದಲ್ಲೇ ಕುಸಿದು ಬಿದ್ದಿದ್ದಾರೆ.
ಆಗ ಸ್ನೇಹಿತರು ತಕ್ಷಣವೇ ಓಡಿ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಶೋರ್ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಹಠಾತ್ ಸಾವಿನಿಂದ ಸ್ನೇಹಿತರು ಮತ್ತು ಕುಟುಂಬಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಹಠಾತ್ ಹೃದಯಾಘಾತ ಮತ್ತು ತಲೆಯ ನರಗಳು ತುಂಡಾಗುವ ಸಂದರ್ಭಗಳಲ್ಲಿ ಇಂತಹ ಸಾವುಗಳು ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರೀನ್ ಇಂಡಿಯಾ ಚಾಲೆಂಜ್ಗೆ ಸಲ್ಮಾನ್ ಸಾಥ್; ಅಭಿಯಾನಕ್ಕೆ ಹೆಗಲಾಗಲು ಅಭಿಮಾನಿಗಳಿಗೆ ಮನವಿ